ಚಿತ್ರದುರ್ಗ : ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರ ಈ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಹೆಚ್.ಆರ್. ಬಸವರಾಜಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನೆಯನ್ನು ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನ್ನದಾತರು ಸರ್ಕಾರದ ವಿರುದ್ದ ಘೋಷಣೆಯನ್ನು ಕೂಗಿ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪ ರಾಜ್ಯದಲ್ಲಿ ಈರುಳ್ಳಿ ಬೆಳೆ ಅತಿ ಮಳೆಯಿಂದ ನಾಶವಾಗಿದೆ ಇನ್ನೊಂದು ಕಡೆ ಬೆಳೆಗೆ ಬೆಲೆ ಇಲ್ಲ.ಬೆಳೆ ಬಂದರೆ ಬೆಲೆ ಇರಲ್ಲ.. ಬೆಲೆ ಇದ್ದರೆ ಬೆಳೆ ಇರಲ್ಲ. ಚಿತ್ರದುರ್ಗ ಜಿಲ್ಲೆ ಬಹಳ ವಿಚಿತ್ರವಾದ ಸನ್ನಿವೇಶವನ್ನು ಹೊಂದಿದೆ.ಕೆಲವು ಕಡೆ ಅತಿವೃಷ್ಟಿ ಮಳೆಯಾದರೆ ಕೆಲವು ಕಡೆ ಅನಾವೃಷ್ಟಿ ಮಳೆಯಾಗುತ್ತದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳನ್ನು ಬರ ತಾಲ್ಲೂಕುಗಳು ಎಂದು ಘೋಷಣೆ ಮಾಡಬೇಕು.ಹಾಗೂ ಉಳಿದ ತಾಲ್ಲೂಕುಗಳಿಗೆ ಅತಿವೃಷ್ಟಿಯ ಪರಿಹಾರ ನೀಡಬೇಕು. ಕಾಯಕವೇ ಕೈಲಾಸ ಎನ್ನುವ ಕಾಲವೊಂದು ಇತ್ತು, ಆದರೆ ಈಗ ಕಳ್ಳತನ ಮಾಡುವುದೇ ಕೈಲಾಸ ಆಗಿದೆ.. ಮತ್ತೆ ಕಾಯಕಕ್ಕೆ ಬೆಲೆ ಬರುವ ಕಾಲ ಬರಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಹೆಕ್ಟರ್ ಒಂದಕ್ಕೆ ಖುಷ್ಕಿ ಭೂಮಿಗೆ 6,800 ರೂ, ನೀರಾವರಿ ಜಮೀನಿಗೆ 17000, ತೋಟಗಾರಿಕೆ ಬೆಳೆಗಳಿಗೆ 21,000 ನಿಗದಿ ಮಾಡಿದೆ.ಆದರೆ ನಮ್ಮ ಅಗ್ರಹ ಎಲ್ಲಾ ಬೆಳೆಗಳಿಗೂ ಹೆಕ್ಟರ್ ಒಂದಕ್ಕೆ 75,000 ನೀಡಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಂತಹ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳ ವಿರುದ್ಧ 420 ಸಂಘಟನೆಗಳು ಸೇರಿಕೊಂಡು ಸುದೀರ್ಘ ಪ್ರತಿಭಟನೆ ಮಾಡಿದ್ದರ ಪರಿಣಾಮವಾಗಿ ಕೇಂದ್ರ ಸರ್ಕಾರ ಈ ಮೂರು ಕಾಯ್ದೆಗಳನ್ನು ರದ್ದುಪಡಿಸಿದೆ ಆದರೆ ರಾಜ್ಯ ಸರ್ಕಾರ ಇನ್ನೂ ಸಹ ಈ ಕಾಯ್ದೆಗಳನ್ನು ರದ್ದುಪಡಿಸಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದೇನೆ ಎಂದರು.
ಬೇರೆ ದೇಶಗಳ ಉತ್ಪನ್ನಗಳು ಯಾವುದೇ ತೆರಿಗೆಯಿಲ್ಲದೇ ಆಮದಾಗುತ್ತೇವೆ.. ಆ ಉತ್ಪನ್ನಗಳ ಮೇಲೆ ನಮ್ಮ ದೇಶದ ರೈತರು ಸ್ಪರ್ಧೆ ಮಾಡಲು ಆಗುವುದಿಲ್ಲ.. ನಮ್ಮ ರೈತರ ಉತ್ಪನ್ನಗಳ ಬೆಲೆಗಳು ಸಹ ಕುಸಿದು ಹೋಗುತ್ತಿವೆ.. ರೈತರ ಮೇಲೆ ಬರೆ ಎಳೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.ರಾಜ್ಯದಲ್ಲಿ ಗನ್ ಪಾಯಿಂಟ್ ನ್ನು ಇಟ್ಟುಕೊಂಡು ಭೂ ಕಬಳಿಕೆ ಮಾಡುತ್ತಿದ್ದಾರೆ.. ಸುಮಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರಿಗೆ ಸಾಗುವಳಿ ಹಕ್ಕು ಪತ್ರ ನೀಡದೇ ಅಲ್ಲಿಂದ ಒಕ್ಕಲೆಬ್ಬಿಸುತ್ತಿದ್ದಾರೆ..ರಾಜ್ಯದಲ್ಲಿ ಅಕ್ರಮ ಸಕ್ರಮ ಸರಿಯಾಗಿ ಜಾರಿಯಾಗುತ್ತಿಲ್ಲ ಲಂಚ ಕೊಟ್ಟವರಿಗೆ ಮಾತ್ರ ಮಾಡಿಕೊಡುತ್ತಿದ್ದಾರೆ.. ನೀವು ಯಾರು ಸಹ ಲಂಚ ಕೊಡಬೇಡಿ ಎಂದು ಅನ್ನದಾತರಿಗೆ ಮನವಿ ಮಾಡಿದರು.
ಸರ್ಕಾರ ರೈತರ ಪಂಪ್ಸೆಟ್ಗಳಿಗೆ ಏಳು ಗಂಟೆಗಳ ಕಾಲ ವಿದ್ಯುತ್ ನೀಡುತ್ತೇವೆ ಎಂದು ಹೇಳಿದೆ ಆದರೆ ಸರಿಯಾಗಿ ಸಮರ್ಪಕವಾದ ವಿದ್ಯುತ್ ನೀಡುತ್ತಿಲ್ಲ.ಸಮರ್ಪಕವಾದ ಏಳು ಗಂಟೆಗಳ ಕಾಲ ವಿದ್ಯುತ್ ತನ್ನ ಹಗಲು ಹೊತ್ತಲ್ಲೇ ನೀಡಬೇಕು.ರೈತರು ಹೊಸದಾಗಿ ಬೋರ್ವೆಲ್ ಕೊರಸಿದರೆ ಅದಕ್ಕೆ ಬೇಕಾದ ಕಂಬಗಳು ಲೈನ್, ಟಿಸಿ ಅನ್ನ ಅವರೇ ಹಾಕಿಸಿಕೊಳ್ಳುವಂತಹ ಮರಣ ಶಾಸನವನ್ನು ಸರ್ಕಾರ ಜಾರಿಗೆ ತಂದಿದೆ ಇದನ್ನು ಸರ್ಕಾರ ಕೂಡಲೇ ರದ್ದುಪಡಿಸಬೇಕು ಎಂದ ಅವರು ದಿನಾಂಕ: 26.11.2025 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಸವರಾಜಪ್ಪ ತಿಳಿಸಿದರು.
ಜಿಲ್ಲಾಧ್ಯಕ್ಷ ಡಿ.ಎಸ್.ಮಲ್ಲಿಕಾರ್ಜನ್ ಮಾತನಾಡಿ, ರೈತರು ಬರಗಾಲಕ್ಕೆ ತುತ್ತಾಗಿದ್ದು, ಸಮಯಕ್ಕೆ ಸರಿಯಾಗಿ ಮಳೆಬಾರದೆ ರೈತರ ಬೆಳೆಗಳಾದ ಶೇಂಗಾ, ರಾಗಿ, ಮೆಕ್ಕೇಜೋಳ, ಈರುಳ್ಳಿ, ಸಾವೆ, ಸಜ್ಜೆ, ನವಣೆ ಇನ್ನು ಮುಂತಾದ ಬೆಳೆಗಳು ಬರಗಾಲದಿಂದ ನಷ್ಟ ಅನುಭವಿಸಿದ್ದು, ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಸಮಸ್ಯೆಗಳನ್ನು ಅರ್ಥೈಸದೇ ಕಣ್ಣು ಮುಚ್ಚಿ ಕುಳಿತಿರುವ ಸರ್ಕಾರಗಳು ಕಣ್ಣ ತೆರೆದು ರೈತರಿಗೆ ಸೂಕ್ತ ಪರಿಹಾರ ಮತ್ತು ಬೆಳೆ ವಿಮೆ ಘೋಷಣೆ ಮಾಡಲು ಹಾಗೂ ಚಿತ್ರದುರ್ಗ ಜಿಲ್ಲೆಯನ್ನು ಬರಗಾಲ ಜಿಲ್ಲೆಯೆಂದು ಘೋಷಿಸಿ, ಮತ್ತು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಳೆ ಕುಸಿದು ರೈತರು ಹೈರಾಣಾಗಿದ್ದು, ತಕ್ಷಣ ಈರುಳ್ಳಿಗೆ ಸರ್ಕಾರವೇ ಬೆಂಬಲ ಬೆಲೆ ಘೋಷಣೆ ಮಾಡಬೇಕು. ರೈತರು ಈಗಾಗಲೇ ಬಹಳಷ್ಟು ನಷ್ಟು ಉಂಟು ಮಾಡಿಕೊಂಡಿದ್ದು, ಬ್ಯಾಂಕಿನವರು ರೈತರಿಗೆ ಲಾಯರ್ ನೋಟೀಸ್ ಕಳುಹಿಸಿರುವುದರಿಂದ ರೈತರು ಆತ್ಮಹತ್ಯೆಯೇ ದಾರಿಯಾಗಿದೆ. ಇತ್ತ ಸಾಲ ತೀರಿಸಲು ಆಗದೇ, ಬ್ಯಾಂಕಿನವರು ನೀಡುವ ಕಿರುಕುಳದಿಂದ ಭಯಬೀತರಾಗಿರುತ್ತಾರೆ. ಇದನ್ನು ತಕ್ಷಣ ನಿಲ್ಲಿಸಬೇಕೆಂದು ತಾವುಗಳು ಸಂಬಂಧಪಟ್ಟ ಜಿಲ್ಲೆಯ ಎಲ್ಲಾ ಬ್ಯಾಂಕಿನವರಿಗೆ ವ್ಯವಸ್ಥಾಪಕರಿಗೆ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಮಹೇಶ್, ಹೊನ್ನೂರು ಮುನಿಯಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಹಿಟ್ಟೂರು ರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಜಲಿಂಗಪ್ಪ, ರೈತರಾದ ಮಾರುತಿ, ವಿರೂಪಾಕ್ಷಪ್ಪ, ಕಬ್ಬಿಗೆರೆ ಕಾಂತರಾಜ್ ಬಾಗೇನಾಳ್ ಕೊಟ್ರಬಸಪ್ಪ, ಮರಳುಸಿದ್ದಯ್ಯ, ನಿಂಗಪ್ಪ, ಚಿತ್ರದುಗ್ ತಾಲ್ಲೂಕು ಅಧ್ಯಕ್ಷ ಕಾಂತರಾಜ್, ಸಿದ್ದಪ್ಪ, ಜಿ.ಕೆ.ನಾಗರಾಜ್, ಹರಳಯ್ಯ, ಸಿದ್ದಬಸಪ್ಪ, ತಿಪ್ಪೇಸ್ವಾಮಿ, ಗಣೇಶ್, ರಾಮರೆಡ್ಡಿ, ನಿರಂಜನ ಮೂರ್ತಿ ಮಂಜುನಾಥ್, ಮಲ್ಲೇಶಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.