ನಿಷೇಧಿತ ಸಂಘಟನೆ ಪಿಎಫ್ಐ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಲ್ಲದೆ, ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಪ್ರಚಾರ ಮಾಡುತ್ತಿದ್ದ ಉಪ್ಪಿನಂಗಡಿ ಮೂಲದ ಮುಸ್ಲಿಂ ಧರ್ಮಗುರು ಸೈಯದ್ ಇಬ್ರಾಹಿಂ ತಂಙಳ್ ಎಂಬಾತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಪಿಎಫ್ಐ ಕಾನೂನು ಬಾಹಿರ ಸಂಘಟನೆಯೆಂದು 28-09-2022 ರಂದು ಭಾರತ ಸರ್ಕಾರ ಘೋಷಣೆ ಮಾಡಿತ್ತು. ಇದರ ಅರಿವಿದ್ದರೂ, ಹಳೆಯ ಪಿಎಫ್ಐ ಪ್ರಮುಖರ ಜೊತೆಗೆ ಸಂಪರ್ಕದಲ್ಲಿದ್ದುಕೊಂಡು ಅ.9ರಂದು ಆರೋಪಿ ಸೈಯ್ಯದ್ ಇಬ್ರಾಹಿಂ ತಂಙಳ್ (55) ಸಾಮಾಜಿಕ ಜಾಲತಾಣ ವಾಟ್ಸ್ ಆಪ್ ಗ್ರೂಪ್ ನಲ್ಲಿ ಕೇಂದ್ರ ಸರಕಾರದಿಂದ ನಿಷೇಧಕ್ಕೊಳಗಾದ ಪಿಎಫ್ಐ ಸಂಘಟನೆಯ ಪರವಾಗಿ ಪೋಸ್ಟ್ ಪ್ರಕಟಿಸಿದ್ದ. ಅಲ್ಲದೇ ಈ ಬಗ್ಗೆ ಸ್ವಯಂ ಪ್ರೇರಿತನಾಗಿ ಪ್ರಚಾರ ಮಾಡಿದ್ದ. ಸೈಯದ್ ಇಬ್ರಾಹಿಂ ನಿಷೇಧಿತ ಸಂಘಟನೆ ಪರವಾಗಿ ಕೃತ್ಯವೆಸಗಿದ್ದರಿಂದ, ಸ್ವಯಂ ದೂರನ್ನು ಪಡೆದು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 113/2025 U/s 10 (a), (i), 13, 18 UAPA Act ರಂತೆ ದಾಖಲಾಗಿದೆ. ಆರೋಪಿಯನ್ನು ಮಂಗಳೂರು ನಗರದ ಉರ್ವ ಸ್ಟೋರ್ ಬಳಿಯಿಂದ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದು, ಆತನ ವಶದಲ್ಲಿದ್ದ ಮೊಬೈಲ್ ಫೋನ್ ವಶಕ್ಕೆ ಪಡೆದು ತನಿಖೆಗೆ ಒಳಪಡಿಸಲಾಗಿದೆ. ಸದ್ಯ ಆರೋಪಿಯನ್ನು 49ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಲಯ ಮತ್ತು ಎನ್.ಐ.ಎ. ಪ್ರಕರಣಗಳ ವಿಶೇಷ ನ್ಯಾಯಾಲಯ ಬೆಂಗಳೂರು ಇಲ್ಲಿಗೆ ಹಾಜರುಪಡಿಸಿದ್ದು, ಆರೋಪಿಗೆ ಅ.24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.