ಚಿತ್ರದುರ್ಗ: ಪ್ರಸ್ತುತ ಜಿಲ್ಲೆಯಲ್ಲಿ ಹಸ್ತಾ ಮಳೆ ಅರ್ಭಟಿಸಿದ ಪರಿಣಾಮ ವಾಣಿವಿಲಾಸ ಸಾಗರ ಜಲಾಶಯಕ್ಕೆ (ಮಾರಿಕಣಿವೆ) ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.
ಅಕ್ಟೋಬರ್ 10ರಂದು ಜಲಾಶಯಕ್ಕೆ 1250 ಕ್ಯೂಸೆಕ್ಸ್ ನೀರು ಒಳಹರಿವು ಹರಿದು ಬಂದಿದ್ದರೆ, ಅ.11ರಂದು ಶನಿವಾರ ಬೆಳಿಗ್ಗೆ ವೇಳೆಗೆ ಜಲಾಶಯಕ್ಕ ಒಳಹರಿವು ನೀರಿನ ಪ್ರಮಾಣ ಏಕಾಏಕಿ ದುಪ್ಪಟ್ಟಾಗಿದ್ದು, ಇಂದು ಜಲಾಶಯಕ್ಕೆ 2917 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, 130 ಅಡಿ ಎತ್ತರದ 30 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 29.919 ಟಿಎಂಸಿ ನೀರು ಸಂಗ್ರಹವಾಗಿದೆ.
ಪ್ರಸ್ತುತ ಜಲಾಶಯದ ನೀರಿನ ಮಟ್ಟ 129.40 ಅಡಿ ತಲುಪಿದೆ. ಇದೇ ಪ್ರಮಾಣದಲ್ಲಿ ಒಳಹರಿವು ಮುಂದುವರೆದರೆ ಜಲಾಶಯವು ಯಾವ ಕ್ಷಣದಲ್ಲಾದರೂ ಭರ್ತಿಯಾಗಿ ಕೋಡಿ ಬೀಳಲಿದ್ದು, ವೇದಾವತಿ ನದಿ ಜಲಾನಯನ ಪ್ರದೇಶದ ಗ್ರಾಮಸ್ಥರು ಎಚ್ಚರಿಕೆಯಿಂದ ಹಾಗೂ ಸುರಕ್ಷಿತ ಜಾಗಗಳಲ್ಲಿ ಇರುವಂತೆ ವಿ.ವಿ.ಸಾಗರ ಜಲಾನಯನ ಅಭಿವೃದ್ಧಿ ನಿಗಮದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ಹಿರಿಯೂರು ತಹಶೀಲ್ದಾರ್ ತಿಳಿಸಿದ್ದಾರೆ.