ನವದೆಹಲಿ : ಭದ್ರತಾ ಮಾನದಂಡಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಇಂಡಿಗೋ ಏರ್‌ಲೈನ್ಸ್‌ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ರೂ.40 ಲಕ್ಷದ ದಂಡ ವಿಧಿಸಿದೆ. ಕ್ಯಾಲಿಕಟ್, ಲೇಹ್ ಮತ್ತು ಕಠ್ಮಂಡುವಿನಂತಹ ‘ವರ್ಗ C’ (ನಿರ್ಣಾಯಕ) ವಿಮಾನ ನಿಲ್ದಾಣಗಳಿಗೆ ಅರ್ಹತೆ ಪಡೆಯದ ಸಿಮ್ಯುಲೇಟರ್‌ಗಳಲ್ಲಿ ಪೈಲಟ್‌ಗಳಿಗೆ ತರಬೇತಿ ನೀಡಿರುವುದು ಈ ಕ್ರಮಕ್ಕೆ ಕಾರಣವಾಗಿದೆ.
ಇಂಡಿಗೋ ಏರ್‌ಲೈನ್ಸ್ ತನ್ನ ಪೈಲಟ್‌ಗಳಿಗಾಗಿ, ಜುಲೈ 24 ರಿಂದ ಜುಲೈ 31, 2025 ರವರೆಗೆ ಹಲವಾರು ತರಬೇತಿ ಕೇಂದ್ರಗಳಲ್ಲಿ ಸಿಮ್ಯುಲೇಟರ್ ತರಬೇತಿ ನಡೆಸಿದ್ದು, ಸುಮಾರು 1,700 ಪೈಲಟ್‌ಗಳು (ಕ್ಯಾಪ್ಟನ್ ಮತ್ತು ಫಸ್ಟ್ ಆಫೀಸರ್‌ಗಳು) ಇದರಲ್ಲಿ ಪಾಲ್ಗೊಂಡಿದ್ದರು. ಆದರೆ ಈ ತರಬೇತಿಯಲ್ಲಿ ಬಳಸಿದ ಸಿಮ್ಯುಲೇಟರ್‌ಗಳು ಕ್ಯಾಲಿಕಟ್, ಲೇಹ್, ಮತ್ತು ಕಠ್ಮಂಡು ವಿಮಾನ ನಿಲ್ದಾಣಗಳಿಗೆ ಅಗತ್ಯವಿರುವ ಮಾನ್ಯತೆ ಅಥವಾ ಅರ್ಹತೆ ಹೊಂದಿರಲಿಲ್ಲ ಎಂಬುದು ಡಿಜಿಸಿಎ ತನಿಖೆಯಲ್ಲಿ ಬಹಿರಂಗವಾಗಿದೆ.
ಈ ವಿಮಾನ ನಿಲ್ದಾಣಗಳನ್ನು “C ವರ್ಗ”ದ ಅನ್ವಯವಾಗಿ ಹೆಚ್ಚಿನ ತಾಂತ್ರಿಕತೆ, ಕಠಿಣ ಹವಾಮಾನ ಮತ್ತು ಭೂಆಕೃತಿಯ ಸವಾಲುಗಳನ್ನು ಹೊಂದಿರುವ ಸ್ಥಳಗಳಾಗಿ ಗುರುತಿಸಲಾಗಿದ್ದು, ಅಂತಹ ಸ್ಥಳಗಳಲ್ಲಿ ಕಾರ್ಯಾಚರಣೆ ಮಾಡಲು ಪೈಲಟ್‌ಗಳಿಗೆ ವಿಶೇಷ ತರಬೇತಿ ಅಗತ್ಯವಿರುತ್ತದೆ. ಆದರೆ ಇಂಡಿಗೋ ಈ ತರಬೇತಿಗೆ ಅನುಮೋದಿತ ಸಿಮ್ಯುಲೇಟರ್‌ಗಳನ್ನು ಬಳಸಿಲ್ಲ.
ಚೆನ್ನೈ, ದೆಹಲಿ, ಬೆಂಗಳೂರು, ಗ್ರೇಟರ್ ನೋಯ್ಡಾ, ಗುರುಗ್ರಾಮ್ ಮತ್ತು ಹೈದರಾಬಾದ್‌ನಲ್ಲಿ ಇದ್ದ ತರಬೇತಿ ಕೇಂದ್ರಗಳಲ್ಲಿ ಬಳಸಿದ 20 ಸಿಮ್ಯುಲೇಟರ್‌ಗಳು, CSTPL, FSTC, ACAT ಮತ್ತು ಏರ್‌ಬಸ್‌ನಂತಹ ಸಂಸ್ಥೆಗಳದ್ದಾಗಿದ್ದರೂ, ಅವುಗಳಿಗೆ ಈ ನಿರ್ಣಾಯಕ ವಿಮಾನ ನಿಲ್ದಾಣಗಳ ತರಬೇತಿಗೆ ಅಗತ್ಯವಿರುವ ಪ್ರಮಾಣಪತ್ರ ಇರಲಿಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ.
ಅಗಸ್ಟ್ 11ರಂದು ಡಿಜಿಸಿಎ ಇಂಡಿಗೋಗೆ ಶೋಕಾಸ್ ನೋಟಿಸ್ ನೀಡಿತ್ತು. ಆದರೆ, ಇಂಡಿಗೋ ನೀಡಿದ ಪ್ರತಿಕ್ರಿಯೆ ಅತೃಪ್ತಿಕರವಾಗಿದೆ ಎಂದು ಗುರುತಿಸಿ, ಇಬ್ಬರು ಪ್ರಮುಖ ಅಧಿಕಾರಿಗಳಾದ ತರಬೇತಿ ನಿರ್ದೇಶಕ ಮತ್ತು ವಿಮಾನ ಕಾರ್ಯಾಚರಣೆ ನಿರ್ದೇಶಕರಿಗೆ ತಲಾ ರೂ.20 ಲಕ್ಷದ ದಂಡವಿಧಿಸಲಾಗಿದೆ. ಈ ದಂಡವನ್ನು 30 ದಿನಗಳೊಳಗೆ ಭಾರತ್‌ಕೋಶ್ ಸರಕಾರದ ಖಾತೆಗೆ ಪಾವತಿಸಬೇಕು ಎಂದು ಸೂಚಿಸಲಾಗಿದೆ.
ಇದೇ ಸಮಯದಲ್ಲಿ, 1937ರ ವಿಮಾನ ನಿಯಮಗಳ ನಿಯಮ 3B ಮತ್ತು 2024ರ ಭಾರತೀಯ ವಾಯುಯಾನ ಅಧಿನಿಯಮದ ಸೆಕ್ಷನ್ 33(1) ಅಡಿಯಲ್ಲಿ, ಇಂಡಿಗೋ ಈ ನಿರ್ಧಾನದ ವಿರುದ್ಧ ರೂ.1,000 ಶುಲ್ಕ ಪಾವತಿಸಿ 30 ದಿನಗಳಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ. ಡಿಜಿಸಿಎ ಇಂಡಿಗೋಗೆ, ನಿಗದಿತ ಅವಧಿಯೊಳಗೆ ದಂಡವನ್ನು ಪಾವತಿಸಿ, ಪಾವತಿಯ ದೃಢೀಕರಣವನ್ನು ಸಲ್ಲಿಸುವಂತೆ ಸೂಚಿಸಿದ್ದು, ವಿಳಂಬ ಅಥವಾ ನಿರ್ಲಕ್ಷ್ಯವಾದರೆ ಮುಂದಿನ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಸಿದೆ.