ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧ ಮಾಡುವುದು ಸರಿಯಲ್ಲ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
RSS ನಿಷ್ಪಕ್ಷಪಾತವಾಗಿ ದೇಶ ಸೇವೆ ಮಾಡುತ್ತಿದೆ. ಪ್ರಾಕೃತಿಕ ವಿ ಕೋಪ ಗಳ ಸಂದರ್ಭದಲ್ಲಿ RSS ನೀಡುವ ಸೇವೆಯನ್ನು ಯಾರೂ ಅಲ್ಲಗಳೆಯುವುದು ಅಸಾಧ್ಯ. ಯಾವುದೇ ರೀತಿಯ ನಿರ್ಣಯಗಳನ್ನು ತೆಗೆದುಕೊಳ್ಳುವ ಮೊದಲು ಸರ್ಕಾರ ಅದರ ಲಾಭ ನಷ್ಟಗಳನ್ನು, ಸಾಧಕ ಬಾಧಕಗಳನ್ನು ಆಲೋಚನೆ ಮಾಡಬೇಕು. ಯಾವ ಸಚಿವರೇ ತಮ್ಮ ಅಭಿಪ್ರಾಯ ಮಂಡನೆ ಮಾಡಲಿ. ಆದರೆ ಅಂತಿಮವಾಗಿ ಸಿ ಎಂ ಸಿದ್ದರಾಮಯ್ಯ ಅವರ ಪರಿಶೀಲನೆಯ ಮೂಲಕವೇ ಅಂತಿಮ ನಿರ್ಣಯವಾಗುತ್ತದೆ. ಎಲ್ಲರ ಜೊತೆ ಚರ್ಚೆ ನಡೆಸಿ ಸಿ ಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಎಲ್ಲವೂ ಸುಖಾಂತ್ಯ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.
ತನ್ನ ಹೆಸರಿಗೆ ತಕ್ಕಂತೆಯೇ ದೇಶ ಸೇವೆಯಲ್ಲಿ RSS ತೊಡಗಿಕೊಂಡಿದೆ. ಒಬ್ಬರಿಗೆ ಸರಿ ಎನಿಸಿದ್ದು, ಇನ್ನೊಬ್ಬರಿಗೆ ತಪ್ಪಾಗಿ ಕಾಣಬಹುದು. ಸರಿಯಾದ ವಿಮರ್ಶೆಯ ಮೂಲಕ ತಪ್ಪುಗಳಿದ್ದಲ್ಲಿ ಅದನ್ನು ಸರಿ ಮಾಡಬೇಕು. ನೂರು ವರ್ಷಗಳ ಸಂಘದ ದೇಶ ಸೇವೆಯನ್ನು ಮರೆಯುವುದು ಅಸಾಧ್ಯ. ಮುಂದೆಯೂ ಸಂಘ ಅದನ್ನು ಮುಂದುವರಿಸಿಕೊಂಡು ಹೋಗುತ್ತದೆ ಎಂದು ಅವರು ತಿಳಿಸಿದ್ದಾರೆ.