ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 1200 ಚದರಡಿ ವಿಸ್ತೀರ್ಣದವರೆಗಿನ ಸೈಟುಗಳಲ್ಲಿ ನಿರ್ಮಾಣ ಮಾಡಿದ ನೆಲ ಮತ್ತು 2 ಅಂತಸ್ತು, ಸ್ಟಿಟ್ ಮತ್ತು ಮೂರು ಅಂತಸ್ತಿನ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ(ಒಸಿ) ಪಡೆಯುವುದರಿಂದ ವಿನಾಯಿತಿ ನೀಡಿ ಸರ್ಕಾರಿ ಆದೇಶ ಹೊರಡಿಸಿದೆ.
ಈ ಮೂಲಕ ಕಳೆದ ಎಂಟು ತಿಂಗಳಿನಿಂದ ಮನೆ ನಿರ್ಮಾಣ ಮಾಡಿ ನೀರು, ವಿದ್ಯುತ್ ಸಂಪರ್ಕ ಇಲ್ಲದೆ ಪರದಾಡುತ್ತಿದ್ದ ಸಾರ್ವಜನಿಕರಿಗೆ ಸರ್ಕಾರದಿಂದ ಸಿಹಿ ಸುದ್ದಿ ನೀಡಲಾಗಿದೆ. ನಕ್ಷೆ ಮಂಜೂರಾತಿ ಪ್ರಕಾರ ವಸತಿ ಅಥವಾ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡದ ಒಸಿ, ಸಿಸಿ ಇಲ್ಲದ ಕಟ್ಟಡಗಳಿಗೆ ನೀರು, ವಿದ್ಯುತ್ ಸಂಪರ್ಕ ನೀಡದಂತೆ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿಯೂ 2025ರ ಮಾರ್ಚ್ ನಿಂದ ಒಸಿ, ಸಿಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ನೀಡುತ್ತಿರಲಿಲ್ಲ.
ವಿದ್ಯುತ್, ನೀರಿನ ಸಂಪರ್ಕಕ್ಕಾಗಿ ಸಾವಿರಾರು ಮಂದಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದರೂ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸ್ಪಂದಿಸಲು ಆಗಿರಲಿಲ್ಲ. ಕಳೆದ ಗುರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಬಿಎ ಆಡಳಿತ ನಿಯಮ 2024ರ ಕಲಂ 241(7)ರ ಅನ್ವಯ ಬೆಂಗಳೂರು ನಗರ ವ್ಯಾಪ್ತಿಯ 5 ಪಾಲಿಕೆಗಳ ವ್ಯಾಪ್ತಿಯಲ್ಲಿಯೂ 1,200 ಚದರಡಿ ವಿಸ್ತೀರ್ಣವರೆಗಿನ ನಿವೇಶನಗಳಲ್ಲಿ ನಿರ್ದಿಷ್ಟ ಅಂತಸ್ತಿನ ವಸತಿ ಕಟ್ಟಡಗಳಿಗೆ ಒಸಿ ವಿನಾಯಿತಿ ನೀಡಲು ನಿರ್ಧರಿಸಲಾಗಿತ್ತು. ಇದನ್ನು ಸರ್ಕಾರದಿಂ ಆದೇಶ ರೂಪದಲ್ಲಿ ಪ್ರಕಟಿಸಲಾಗಿದೆ.
(ಸಾಂದರ್ಭಿಕ ಚಿತ್ರ)