ನಾಸಿಕ್ : ಭಾರತದ ಸ್ವದೇಶಿ ಯುದ್ಧ ವಿಮಾನ ತೇಜಸ್ ಎಂಕೆ1ಎ ಇಂದು ತನ್ನ ಮೊದಲ ಹಾರಾಟ ನಡೆಸಿದೆ. ನಾಸಿಕ್‌ನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ವಿಮಾನ ಉತ್ಪಾದನಾ ವಿಭಾಗದಲ್ಲಿ ಈ ಹಾರಾಟ ನಡೆಯಿತು. ಭಾರತದಲ್ಲಿ ಯುದ್ಧ ವಿಮಾನ ತಯಾರಿಕೆಯ ಅಭಿವೃದ್ಧಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೇ ವೇಳೆ ರಾಜನಾಥ್ ಸಿಂಗ್ ಅವರು LCA ಎಂಕೆ1ಎಯ ಮೂರನೇ ಉತ್ಪಾದನಾ ಘಟಕ ಮತ್ತು ಎಚ್‌ಟಿಟಿ-40 ವಿಮಾನದ ಎರಡನೇ ಘಟಕವನ್ನು ಉದ್ಘಾಟಿಸಿದರು.
ತೇಜಸ್ MK1A ಅನ್ನು ವಾಯುಪಡೆಗೆ ಸೇರಿಸುವ ದಿನಾಂಕಗಳನ್ನು ಘೋಷಿಸಿಲ್ಲ. ಆದರೆ ಮುಂದಿನ ನಾಲ್ಕು ವರ್ಷಗಳಲ್ಲಿ 83 ತೇಜಸ್ ಮಾರ್ಕ್ 1A ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಪೂರೈಸಲಾಗುವುದು ಎಂದು ಹೆಚ್‌ಎಎಲ್ ಹೇಳಿದೆ.
ತೇಜಸ್ Mk-1A ತೇಜಸ್ Mk-1 ಆವೃತ್ತಿಗಿಂತ ಹಲವಾರು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ, ಇದರಲ್ಲಿ ಇಸ್ರೇಲಿ EL/M-2025 AESA ರಾಡಾರ್, ಜಾಮರ್‌ಗಳೊಂದಿಗೆ ಸುಧಾರಿತ ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್ ಮತ್ತು ಬಿಯಾಂಡ್ ವಿಷುಯಲ್ ರೇಂಜ್ (BVR) ಸಾಮರ್ಥ್ಯಗಳು ಸೇರಿವೆ.