ಮಂಡ್ಯ: ಮೂರು ಸಾರಿಗೆ ಬಸ್ ಗಳ ನಡುವೆ ಸರಣಿ ಅಪಘಾತ ಸಂಭವಿಸಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಎಂಟು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, 70 ಅಧಿಕ ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 948ರಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಾಚನಹಳ್ಳಿ ಸಮೀಪ ಭಾನುವಾರ ಸಂಜೆ ಕೊಳ್ಳೆಗಾಲ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ನ ಟೈಯರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಮಳವಳ್ಳಿಯಿಂದ ಕೊಳ್ಳೇಗಾಲದ ಕಡೆಗೆ ಹೋಗುತ್ತಿದ್ದ ಮತ್ತೊಂದು ಸಾರಿಗೆ ಬಸ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಮಳವಳ್ಳಿ ಕಡೆಯಿಂದ ಬಂದ ಇನ್ನೊಂದು ಸಾರಿಗೆ ಬಸ್ ಕೂಡ ಅಪಘಾತಕ್ಕೀಡಾದ ಬಸ್ ಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ ಮಳವಳ್ಳಿಯ 60 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಐವತ್ತು ವರ್ಷದ ಮತ್ತೊಬ್ಬ ಮಹಿಳೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.