ಮಹಾರಾಷ್ಟ್ರ : ಸತಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ 26 ವರ್ಷದ ಮಹಿಳಾ ವೈದ್ಯೆಯೊಬ್ಬರು ಗುರುವಾರ ರಾತ್ರಿ ಹೋಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಅಂಗೈಯಲ್ಲಿ ಮತ್ತು ನಾಲ್ಕು ಪುಟಗಳ ಪತ್ರದಲ್ಲಿ, ಕಳೆದ ಐದು ತಿಂಗಳುಗಳಿಂದ ಪೊಲೀಸ್ ಅಧಿಕಾರಿ ಮತ್ತು ಸಂಸದರ ಆಪ್ತರು ತಮಗೆ ಅತ್ಯಾಚಾರ ಹಾಗೂ ಕಿರುಕುಳ ನೀಡಿದ್ದಾರೆ ಎಂದು ಬರೆದಿದ್ದಾರೆ ಎಂದು ವರದಿಯಾಗಿದೆ.
ಉಪ-ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಈ ಯುವತಿಗೆ ಕೇವಲ ಒಂದು ತಿಂಗಳು ಬಾಂಡ್ ಸೇವೆ ಬಾಕಿ ಇತ್ತು. ಬಳಿಕ ಸ್ನಾತಕೋತ್ತರ ಅಧ್ಯಯನಕ್ಕೆ ಸೇರ್ಪಡೆಗೊಳ್ಳಬೇಕು ಎಂಬ ಕನಸು ಇತ್ತು. ಆದರೆ ಕಿರುಕುಳ ಮತ್ತು ಒತ್ತಡಗಳಿಂದ ಕಂಗೆಟ್ಟು ಅವರು ಬದುಕಿಗೆ ತೆರೆ ಎಳೆದಿದ್ದಾರೆ.
ಪತ್ರದಲ್ಲಿ ಅವರು ಸಬ್ ಇನ್ಸ್ಪೆಕ್ಟರ್ ಗೋಪಾಲ್ ಬದ್ನೆ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಪೊಲೀಸ್ ಪ್ರಕರಣಗಳ ಆರೋಪಿ ವ್ಯಕ್ತಿಗಳಿಗೆ ನಕಲಿ ಫಿಟ್ನೆಸ್ ಪ್ರಮಾಣಪತ್ರ ನೀಡಲು ತಮ್ಮ ಮೇಲೆ ಒತ್ತಡ ಹೇರಲಾಗುತ್ತಿತ್ತು ಎಂದು ಬರೆದಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಕರೆತರದೇ ಇದ್ದವರಿಗೂ ಪ್ರಮಾಣಪತ್ರ ನೀಡಲು ಒತ್ತಾಯಿಸಲಾಗುತ್ತಿತ್ತು. “ನಾನು ನಿರಾಕರಿಸಿದಾಗ, ಪೊಲೀಸ್ ಅಧಿಕಾರಿಗಳು ಹಾಗೂ ಸಂಸದನ ಆಪ್ತರು ನನ್ನ ಮೇಲೆ ಕಿರುಕುಳ ನೀಡಿದರು” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೆ, ಮನೆ ಮಾಲೀಕ ಪ್ರಶಾಂತ್ ಬಂಕರ್ ಸಹ ಕಿರುಕುಳ ನೀಡಿದ್ದಾನೆ ಎಂದು ಅವರು ಬರೆದಿದ್ದಾರೆ. ಈ ಪ್ರಕರಣದಲ್ಲಿ ಬದ್ನೆ ಮತ್ತು ಬಂಕರ್ ವಿರುದ್ಧ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಕೊಲ್ಹಾಪುರ ವಿಭಾಗ) ಸುನಿಲ್ ಫುಲಾರಿ ಅವರು, “ಆರೋಪಿ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ” ಎಂದು ತಿಳಿಸಿದ್ದಾರೆ.
ವೈದ್ಯೆಯ ಸಂಬಂಧಿಯ ಪ್ರಕಾರ, ಮೃತರು ಈ ವಿಷಯವಾಗಿ ಹಲವಾರು ಬಾರಿ ಎಸ್ಪಿ ಮತ್ತು ಡಿಎಸ್ಪಿಗೆ ದೂರು ನೀಡಿದ್ದರು, ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ. “ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಮತ್ತು ಸುರಕ್ಷತಾ ಸಮಸ್ಯೆಗಳ ಕುರಿತು ಹಲವು ಬಾರಿ ತಿಳಿಸಿದ್ದರೂ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ” ಎಂದು ಅವರು ಆರೋಪಿಸಿದ್ದಾರೆ.
ಈ ಘಟನೆ ಮಹಾರಾಷ್ಟ್ರದಲ್ಲಿ ರಾಜಕೀಯ ತೀವ್ರತೆಗೂ ಕಾರಣವಾಗಿದೆ. ಕಾಂಗ್ರೆಸ್ ನಾಯಕ ವಿಜಯ್ ನಾಮದೇವರಾವ್ ವಡೆಟ್ಟಿವಾರ್ ತಮ್ಮ ಟ್ವೀಟ್ನಲ್ಲಿ, “ರಕ್ಷಕನು ಪರಭಕ್ಷಕನಾದಾಗ ಜನರಿಗೆ ಭದ್ರತೆ ಎಲ್ಲಿ? ಮಹಿಳಾ ವೈದ್ಯೆ ಕಿರುಕುಳದ ವಿರುದ್ಧ ದೂರು ನೀಡಿದಾಗ ಕ್ರಮ ಕೈಗೊಳ್ಳದಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಮಹಾಯುತಿ ಸರ್ಕಾರವು ಪೊಲೀಸರನ್ನು ಪದೇ ಪದೇ ರಕ್ಷಿಸುತ್ತಿದೆ” ಎಂದು ಆರೋಪಿಸಿದ್ದಾರೆ.
































