ನವದೆಹಲಿ : ಶತಮಾನಗಳ ಹಿಂದಿನಿಂದಲೂ ಮನುಷ್ಯರ ಅಂತ್ಯಕ್ರಿಯೆ ಸಾಂಪ್ರದಾಯಿಕವಾಗಿ ಶವದ ದಹನ ಅಥವಾ ಸಮಾಧಿ ಮೂಲಕ ನೆರವೇರುತ್ತಿತ್ತು. ಹಿಂದೆ ಅಗ್ನಿಯ ಸಹಾಯದಿಂದ ದೇಹವನ್ನು ಸುಡುವುದು ಸಾಮಾನ್ಯವಾಗಿದ್ದರೆ, ಈಗ ವಿದ್ಯುತ್ ಬಳಸಿ ಪ್ರಕ್ರಿಯೆ ನಡೆಯುತ್ತಿದೆ. ಹವಾಮಾನ ಬದಲಾವಣೆ, ಪರಿಸರ ಮಾಲಿನ್ಯ ಮತ್ತು ಪರಿಸರ ಸ್ನೇಹಿ ಪರ್ಯಾಯಗಳ ಬಗ್ಗೆ ಹೆಚ್ಚುತ್ತಿರುವ ಜನರ ಚಿಂತನೆಯಿಂದ, ಅಂತ್ಯಕ್ರಿಯೆಯ ಸಂಪ್ರದಾಯವೂ ಬದಲಾಗುತ್ತಿದೆ. ಇದೀಗ ನೂತನ ಶೈಲಿಯ ಅಂತ್ಯಕ್ರಿಯೆಯ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಹೊಸ ವಿಧಾನವನ್ನು ನೀರಿನ ದಹನ ಅಥವಾ ವೈಜ್ಞಾನಿಕವಾಗಿ ಅಕ್ವಾಮೇಷನ್ ಎಂದು ಕರೆಯಲಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ದೇಹವನ್ನು ಕೇವಲ ನೀರು ಮತ್ತು ಕ್ಷಾರ (ಪೋಟ್ಯಾಸಿಯಮ್ ಹೈಡ್ರಾಕ್ಸೈಡ್) ಮಿಶ್ರಣ ಬಳಸಿ ಕರಗಿಸಲಾಗುತ್ತದೆ. ದೇಹವನ್ನು ಶೇಕಡಾ 95 ರಷ್ಟು ನೀರು ಮತ್ತು 5% ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ ಇರುವ ಟ್ಯಾಂಕ್‌ನಲ್ಲಿ 150 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಹಾಗೂ 10–20 ವಾತಾವರಣ ಒತ್ತಡದಲ್ಲಿ ನಿರ್ವಹಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ 3 ರಿಂದ 16 ಗಂಟೆಗಳೊಳಗೆ ದೇಹದ ಮೃದು ಅಂಗಗಳು ಕರಗುತ್ತವೆ ಮತ್ತು ಅಮೈನೋ ಆಮ್ಲಗಳು, ಸಕ್ಕರೆಗಳು ಮತ್ತು ಲವಣಗಳಾಗಿ ಪರಿವರ್ತಿತವಾಗುತ್ತವೆ. ಉಳಿದ ಮೂಳೆಗಳನ್ನು ಒಣಗಿಸಿ, 800-1000 ಡಿಗ್ರಿಗಳಲ್ಲಿ ಹುರಿಯಲಾಗುತ್ತದೆ ಮತ್ತು ಪುಡಿಮಾಡಲಾಗುತ್ತದೆ.
ಪರಿಸರ ಸ್ನೇಹಿ ಆಯ್ಕೆ :
ಸಾಂಪ್ರದಾಯಿಕ ದಹನದಲ್ಲಿ 400 ಲೀಟರ್ ಇಂಧನ ಬಳಸಿ, 1.5 ಟನ್ ಕಾರ್ಬನ್ ಡೈಆಕ್ಸೈಡ್ ಹಾಗೂ ವಿಷಕಾರಿ ಅನಿಲಗಳು ವಾಯುವಿನಲ್ಲಿ ಬಿಡುಗಡೆಯಾಗುತ್ತವೆ. ನೆಲದೊಳಗೆ ಹೂತಾಗ ಮಾಲಿನ್ಯದ ಸಾಧ್ಯತೆಯಿದೆ. ಆದರೆ ನೀರಿನ ದಹನದಲ್ಲಿ ಮಾತ್ರ 100 ಲೀಟರ್ ನೀರು ಬೇಕಾಗುತ್ತದೆ, ಯಾವುದೇ ಇಂಧನ ಬೃಹತ್ ಆಗಿ ಬಳಸುವ ಅಗತ್ಯವಿಲ್ಲ, ಗಾಳಿಯನ್ನೂ, ನೀರನ್ನೂ ಕಲುಷಿತಗೊಳಿಸುವುದಿಲ್ಲ. ಇಂಧನ ಉಳಿವು ಶೇಕಡಾ 90 ರಷ್ಟಿದೆ.
ವಿದೇಶದಲ್ಲಿ ಈ ಪ್ರಕ್ರಿಯೆ ಹೆಚ್ಚು ಜನಪ್ರಿಯವಾಗಿದೆ. 28 ಅಮೆರಿಕಾ ರಾಜ್ಯಗಳಲ್ಲಿ ಕಾನೂನಾಗಿ ಗುರುತಿಸಲ್ಪಟ್ಟಿದ್ದು, ಯುಕೆ, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿಯೂ ಇದು ಹೆಚ್ಚಾಗಿ ಆರಾಮದಾಯಕವಾಗಿ ಬಳಕೆಯಾಗುತ್ತಿದೆ. ಸಾಕುಪ್ರಾಣಿ ಅಕ್ವಾಮೇಷನ್ ಮಾರುಕಟ್ಟೆ ಈಗ 845 ಮಿಲಿಯನ್ ಡಾಲರ್ ಮೌಲ್ಯಕ್ಕೇರಿದೆ.
ಪರಿಸರ ಮಾಲಿನ್ಯ ತಗ್ಗಿಸುವ ಹೊಸ ಆಯ್ಕೆಯಾಗಿ, ನೀರಿನ ದಹನ ಪ್ರಕ್ರಿಯೆ ಭವಿಷ್ಯದಲ್ಲಿ ಅಂತ್ಯಕ್ರಿಯೆಗಳ ಪ್ರಮುಖ ವಿಧಾನವಾಗಲಿದೆ ಎಂಬುದು ಸ್ಪಷ್ಟವಾಗಿದೆ.
































