ಯಾದಗಿರಿ: ಶಹಾಪುರ ತಾಲೂಕಿನ ಚಾಮನಾಳ ತಾಂಡಾದಲ್ಲಿ ಅನೈತಿಕ ಸಂಬಂಧದ ಅಪವಾದ ಹೊರಿಸಿ ಮಹಿಳೆಯ ತಲೆಬೋಳಿಸಿ ಸುಣ್ಣ ಹಚ್ಚಿ, ಖಾರದ ಪುಡಿ ಎರಚಿ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ನಡೆದಿರುವುದಾಗಿ ತಡವಾಗಿ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ತೂರಿಬಾಯಿ, ಡಾಕಪ್ಪ ಎಂಬ ಇಬ್ಬರನ್ನು ಈಗಾಗಲೇ ಬಂಧಿಸಿಲಾಗಿದೆ. ಚಾಮನಾಳ ತಾಂಡಾದ 35 ವರ್ಷದ ಮಹಿಳೆ ಸಂತ್ರಸ್ತೆಯಾಗಿದ್ದಾರೆ. ಮಹಿಳೆಯ ಕೂದಲು ಕತ್ತರಿಸಿ, ಸುಣ್ಣ ಹಚ್ಚಿ, ಖಾರದ ಪುಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ.
ದೌರ್ಜನ್ಯಕ್ಕೆ ಒಳಪಟ್ಟ ಮಹಿಳೆಯ ತನ್ನ ಆರೋಗ್ಯ ಸಮಸ್ಯೆಯಿಂದಾಗಿ ಕಲಬುರಗಿಯಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಆಗಾಗ ಹೋಗುತ್ತಿದ್ದಳು. ಆಕೆಯ, ಅಳಿಯ ಕರೆದುಕೊಂಡು ಹೋಗುತ್ತಿದ್ದ. ಆದರೆ, ಇದನ್ನೇ ಆತನ ಜತೆಗೆ ಅಕ್ರಮ ಸಂಬಂಧ ಇದೆ ಎಂಬ ಅನುಮಾನದಿಂದ ದೌರ್ಜನ್ಯ ಎಸಗಲಾಗಿದೆ.
ಮಹಿಳೆಯನ್ನು ಸುಮಾರು 11 ಜನರು ಒದ್ದು ನೆಲಕ್ಕೆ ಕೆಡವಿದ್ದಾರೆ. ನಂತರ ಆಕೆಯನ್ನು ಹಿಡಿದು ಕೂದಲುಗಳನ್ನು ಕತ್ತರಿಯಿಂದ ಕತ್ತರಿಸಿದ್ದಾರೆ. ತಲೆಗೆ ಸುಣ್ಣ ಹಚ್ಚಿ, ಖಾರದ ಪುಡಿಯನ್ನು ಮೈಮೇಲೆ ಹಾಕಿ ಮಹಿಳೆಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪಗಳು ಕೇಳಿಬಂದಿದೆ.
ಘಟನೆ ಬಳಿಕ ಕೆಂಭಾವಿ ಪೋಲಿಸ್ ಠಾಣೆಯಲ್ಲಿ 11 ಜನರ ವಿರುದ್ಧ ಕೇಸ್ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನುಳಿದ 9 ಜನ ಆರೋಪಿಗಳಾದ ವಿಜಯಕುಮಾರ್, ತಿಪ್ಪಣ್ಣ, ರಮೇಶ, ದೇವಿಭಾಯಿ, ತಿಪ್ಪಿಭಾಯಿ, ರೂಪ್ಲಿಭಾಯಿ, ಅನುಸೂಯಾ, ಚಾವಳಿಭಾಯಿ, ತಿಪ್ಪಣ್ಣ ನಾಯ್ಕ್ ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದು,ಆರೋಪಿಗಳಿಗಾಗಿ ಕೆಂಭಾವಿ ಪೋಲಿಸರ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಎಸ್ ಪಿ ಪ್ರಥ್ವಿಕ್ ಶಂಕರ್ ತಿಳಿಸಿದ್ದಾರೆ.
































