ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇತ್ತೀಚಿನ ಚೀನಾ ಪ್ರವಾಸದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ನಿಗೂಢ ವರದಿಗಳು ಹರಿದಾಡುತ್ತಿವೆ. ಈ ವರದಿಗಳ ಪ್ರಕಾರ, ಪ್ರಧಾನಿ ಮೋದಿ ಚೀನಾ ಭೇಟಿಯ ವೇಳೆ ಹತ್ಯೆ ಸಂಚು ನಡೆದಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಈ ಆರೋಪಗಳನ್ನು ಯಾವುದೇ ಅಧಿಕೃತ ಮೂಲಗಳು ಅಥವಾ ಸರ್ಕಾರಗಳು ದೃಢಪಡಿಸಿಲ್ಲ.
ಕಳೆದ ಸೆಪ್ಟೆಂಬರ್ 2 ರಂದು ಪ್ರಧಾನಿ ನರೇಂದ್ರ ಮೋದಿ ಚೀನಾದಿಂದ ಹಿಂದಿರುಗಿದ ಮರುದಿನ SEMICON ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ಅವರು, ನಾನು ಚೀನಾಕ್ಕೆ ಹೋಗಿ ವಾಪಸ್ ಬಂದೆ ಎಂದಾಗ ಸಭಿಕರು ಭಾರಿ ಚಪ್ಪಾಳೆ ತಟ್ಟಿದ್ದರು. ಆಗ ಕೂಡಲೇ ಪ್ರಧಾನಿ ಮೋದಿ, “ನಾನು ಚೀನಾಕ್ಕೆ ಹೋಗಿದ್ದಕ್ಕಾಗಿ ಚಪ್ಪಾಳೆ ತಟ್ಟುತ್ತಿದ್ದೀರಾ ಅಥವಾ ನಾನು ಹಿಂತಿರುಗಿದ್ದಕ್ಕಾಗಿ ಚಪ್ಪಾಳೆ ತಟ್ಟುತ್ತಿದ್ದೀರಾ?” ಎಂಬುವುದಾಗಿ ಪ್ರಶ್ನಿಸಿದ್ದಾಗ ಯಾರೂ ಇದರ ಒಳಾರ್ಥವನ್ನು ತಿಳಿಯಲೇ ಇಲ್ಲ. ಆದರೆ, ಅಂದು ಆಗಿದ್ದೇ ಬೇರೆ. ಸ್ವಲ್ಪ ಹೆಚ್ಚೂ ಕಮ್ಮಿಯಾಗಿದ್ದರೂ ಪ್ರಧಾನಿ ಮೋದಿ ಪ್ರಾಣಕ್ಕೆ ಕಂಟಕವಿತ್ತು ಎನ್ನುವ ವಿಚಾರ ಇದೀಗ ರಿವೀಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಚಾರದ ಪ್ರಕಾರ, ಚೀನಾ ಭೇಟಿಯ ಸಮಯದಲ್ಲಿ ಅಮೆರಿಕದ ವಿಶೇಷ ಪಡೆ ಅಧಿಕಾರಿ ಟೆರೆನ್ಸ್ ಅರ್ವೆಲ್ಲೆ ಜಾಕ್ಸನ್ ಅವರ ನಿಗೂಢ ಸಾವು ಈ ಸಂಚಿನೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗಿದೆ. ಆದರೆ ಈ ವಿಷಯದ ಬಗ್ಗೆ ಅಮೆರಿಕ ಅಥವಾ ಭಾರತ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ವರದಿಗಳ ಪ್ರಕಾರ, ಚೀನಾ–ಭಾರತ ಸಂಬಂಧ ಹಾಳು ಮಾಡುವ ಉದ್ದೇಶದಿಂದ ಸಂಚು ರೂಪಿತವಾಗಿತ್ತು ಎಂದು ಹೇಳಲಾಗುತ್ತಿದೆಯಾದರೂ, ಅದರ ಬಗ್ಗೆ ಸ್ಪಷ್ಟ ಸಾಕ್ಷಿ ದೊರೆತಿಲ್ಲ. ಚೀನಾ ಭೇಟಿಯ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಪ್ರಧಾನಿ ಮೋದಿ ನಡುವಿನ 45 ನಿಮಿಷಗಳ ಕಾರು ಸಂಭಾಷಣೆ ಕೂಡ ಇದೇ ಸಂದರ್ಭದಲ್ಲಿ ನಡೆದಿತ್ತು ಎಂಬ ಊಹಾಪೋಹಗಳು ಮುಂದುವರಿದಿವೆ.
ತಜ್ಞರ ಪ್ರಕಾರ, ಇಂತಹ ಅಸತ್ಯ ಅಥವಾ ದೃಢೀಕರಣವಿಲ್ಲದ ಮಾಹಿತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ಹರಡುವ ಅಪಾಯವಿದೆ. ರಾಷ್ಟ್ರದ ಭದ್ರತೆ, ವಿದೇಶಾಂಗ ನೀತಿ ಅಥವಾ ನಾಯಕತ್ವದ ಬಗ್ಗೆ ಗಂಭೀರ ಆರೋಪಗಳು ಬಂದಾಗ, ಸಾರ್ವಜನಿಕರು ಅಧಿಕೃತ ಮೂಲಗಳಿಂದ ಮಾತ್ರ ಮಾಹಿತಿ ಪಡೆಯಬೇಕು ಎಂಬ ಸಲಹೆ ನೀಡಲಾಗಿದೆ.































