ಬೆಂಗಳೂರು : ಕರ್ನಾಟಕ ಕಾಂಗ್ರೆಸ್ನಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಜೋರಾಗುತ್ತಿರುವ ಸಮಯದಲ್ಲೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾನುವಾರ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ನಾಯಕರನ್ನು ಅವರು ಅಲ್ಲಿ ಭೇಟಿಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಡಿಕೆ ಶಿವಕುಮಾರ್ ಅವರು ನವೆಂಬರ್ 11ರಂದು ಮತ್ತೆ ದೆಹಲಿಗೆ ತೆರಳಲಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಪ್ರತ್ಯೇಕ ಮಾತುಕತೆಗೆ ಸಮಯ ಕೇಳಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಆ ಭೇಟಿಯ ವೇಳೆ ಅಧಿಕಾರ ಹಂಚಿಕೆ, ರಾಜ್ಯದ ರಾಜಕೀಯ ಭವಿಷ್ಯ ಮತ್ತು ಸಂಘಟನೆ ಸಂಬಂಧಿತ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.
ಇದಕ್ಕೂ ಮುಂದಾಗಿ, ನವೆಂಬರ್ 11ರಂದು ಬಿಹಾರ ಚುನಾವಣೆಯ ಎರಡನೇ ಹಂತದ ಮತದಾನವೂ ಅಂತ್ಯವಾಗಲಿದೆ. ಅದರವರೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿರಲು ತಮ್ಮ ಬೆಂಬಲಿಗರಿಗೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರ ನವೆಂಬರ್ 11ರ ದೆಹಲಿ ಪ್ರವಾಸವು ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲ ಮೂಡಿಸಿದೆ.
































