ಚಿತ್ರದುರ್ಗ : ನಾಡ ದೊರೆ ರಾಜಾವೀರ ಮದಕರಿನಾಯಕನ ಜಯಂತ್ಯೋತ್ಸವ ಅಂಗವಾಗಿ ಜಿಲ್ಲಾ ನಾಯಕ ಸಮಾಜದ ವತಿಯಿಂದ ಸೋಮವಾರ ನಗರದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಯಿತು.
ಹೊಳಲ್ಕೆರೆ ರಸ್ತೆ ಕನಕ ವೃತ್ತದಿಂದ ಹೊರಟ ಮೆರವಣಿಗೆಯನ್ನು ಪ್ರಸನ್ನಾನಂದಸ್ವಾಮೀಜಿ, ಮಾಜಿ ಸಚಿವ ಶ್ರೀರಾಮುಲು, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಇವರುಗಳು ಉದ್ಗಾಟಿಸಿದರು.
ಡೊಳ್ಳು, ತಮಟೆ, ಉರುಮೆ, ಕಹಳೆ ವಾದ್ಯ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿತ್ತು. ಮೆರವಣಿಗೆಯುದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ರಾಜವೀರ ಮದಕರಿನಾಯಕನ ಬೃಹತ್ ಫೋಟೋ, ಮದವೇರಿದ ಆನೆಯನ್ನು ಮದಕರಿನಾಯಕ ಮದವಡಗಿಸುತ್ತಿರುವ ಸ್ಥಬ್ತ ಚಿತ್ರ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿತ್ತು.
ವಾಲ್ಮೀಕಿ ಭವನದ ಮುಂಭಾಗವಿರುವ ಮದಕರಿನಾಯಕನ ಪ್ರತಿಮೆಯನ್ನು ವರ್ಣರಂಜಿತವಾಗಿ ಅಲಂಕರಿಸಿ ವಿದ್ಯುತ್ ದೀಪಗಳಿಂದ ಜಗಮಗಿಸುವಂತೆ ಸಿಂಗರಿಸಲಾಗಿತ್ತು.
ಕನಕದಾಸ, ಸಂಗೊಳ್ಳಿರಾಯಣ್ಣ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ವೀರವನಿತೆ ಒನಕೆ ಓಬವ್ವ ಪ್ರತಿಮೆಗಳನ್ನು ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಿ ರಸ್ತೆಯುದ್ದಕ್ಕೂ ಬಾಳೆಕಂಬಗಳನ್ನು ಕಟ್ಟಲಾಗಿತ್ತು.
ಮೆರವಣಿಗೆ ಸಂದರ್ಭದಲ್ಲಿ ಸಂಚಾರಕ್ಕೆ ಅಡ್ಡಿಯುಂಟಾಗಬಾರದೆಂದು ಅಲ್ಲಲ್ಲಿ ಪೊಲೀಸ್ ಬ್ಯಾರಿಕೇಡ್ಗಳನ್ನಿಟ್ಟು ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಮೇದಾರ ಕೇತೇಶ್ವರಸ್ವಾಮೀಜಿ, ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ಮಂಜುನಾಥ್, ನಗರಸಭೆ ಮಾಜಿ ಸದಸ್ಯ ಸಿ.ಟಿ.ರಾಜೇಶ್ ಸೇರಿದಂತೆ ನಾಯಕ ಸಮಾಜದ ಅನೇಕ ಮುಖಂಡರುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

































