ಜೈಪುರ : ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿ ಬೆಂಕಿ ಹೊತ್ತಿಕೊಂಡ ಘಟನೆ ಜೈಪುರ-ದೆಹಲಿ ಹೆದ್ದಾರಿಯಲ್ಲಿ ನಡೆದಿದೆ.
ಘಟನೆಯಲ್ಲಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನಗರದ ಮನೋಹರ್ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಟೋಡಿ ಗ್ರಾಮದಲ್ಲಿರುವ ಇಟ್ಟಿಗೆ ಗೂಡಿಗೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಗ್ರಾಮದ ಕಚ್ಚಾ ರಸ್ತೆಯ ಮೂಲಕ ಬಸ್ ಸಾಗುತ್ತಿತ್ತು. ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ನಂತರ ಬಸ್ಗೆ ಬೆಂಕಿ ಹೊತ್ತಿಕೊಂಡಿತ್ತು, ನಂತರ ಅದನ್ನು ನಂದಿಸಲಾಯಿತು ಎಂದು ಜೈಪುರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ, ದಾರಿಹೋಕರು ಮತ್ತು ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದರು. ಅಗ್ನಿಶಾಮಕ ದಳದವರು ಸ್ಥಳಕ್ಕೆ ತಲುಪುವ ಮೊದಲೇ ಹಲವಾರು ಪ್ರಯಾಣಿಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಗಾಯಾಳುಗಳನ್ನು ಶಹಪುರ ಉಪ-ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

































