ನವದೆಹಲಿ: ರಷ್ಯಾದ ಎರಡು ಪ್ರಮುಖ ತೈಲ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ಹೊಸದಾಗಿ ತೈಲ ಖರೀದಿಯನ್ನು ನಿಲ್ಲಿಸಿವೆ. ಅಮೆರಿಕ ನಿರ್ಬಂಧದ ಪರಿಣಾಮ, ಪಾವತಿ ವಿಧಾನ ಕುರಿತ ಗೊಂದಲ ಬಗೆಹರಿಯುವವರೆಗೆ ರಷ್ಯಾದ ರೋಸ್ ನೆಫ್ಟ್ ಮತ್ತು ಲೋಕೋಯಿಲ್ ನಿಂದ ತೈಲ ಖರೀದಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಆದರೆ ತಕ್ಷಣದ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ದೀರ್ಘಕಾಲಿನ ಒಪ್ಪಂದದ ಬದಲಾಗಿ ಸ್ಪಾಟ್ ಮಾರ್ಕೆಟ್ ನಿಂದ ತೈಲ ಖರೀದಿಗೆ ದೇಶದ ಅತಿ ದೊಡ್ಡ ತೈಲ ಉದ್ಯಮವಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಿರ್ಧಾರ ಕೈಗೊಂಡಿದೆ.
ರಿಲಯನ್ಸ್ ಕೂಡ ತಾತ್ಕಾಲಿಕ ಖರೀದಿ ಬಗ್ಗೆ ಆಸಕ್ತಿ ತೋರಿಸಿದೆ. ರಷ್ಯಾದ ಒಟ್ಟು ಪ್ರಮಾಣದಲ್ಲಿ ಭಾರತವೇ 40% ತೈಲವನ್ನು ಖರೀದಿಸುತ್ತಿತ್ತು. ಆದರೆ, ಕಠಿಣ ನಿಯಮಗಳ ಕಾರಣ ಏಪ್ರಿಲ್ ನಿಂದ ಸೆಪ್ಟೆಂಬರ್ ನಡುವೆ ಶೇಕಡ 8.4 ರಷ್ಟು ಕುಸಿತ ಕಂಡಿದ್ದು, ಇದೀಗ ನಿರ್ಬಂಧದ ಕಾರಣ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
































