ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಗ್ಯಾಂಗ್ ಮೇಲೆ ದೋಷಾರೋಪ ನಿಗದಿ ಶುಕ್ರವಾರ ಆಗುವುದಕ್ಕಿತ್ತು. ಆದರೆ ದೋಷಾರೋಪ ನಿಗದಿಯನ್ನು ನ್ಯಾಯಾಲಯವು ನವೆಂಬರ್ ೩ಕ್ಕೆ ಮುಂದೂಡಿದೆ.
ಶುಕ್ರವಾರ ದರ್ಶನ್ ಹಾಗೂ ಇತರೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಆದರೆ ಕೆಲವೇ ನಿಮಿಷಕ್ಕೆ ವಿಚಾರಣೆ ಮುಗಿದಿದ್ದು, ದೋಷಾರೋಪ ನಿಗದಿಯನ್ನು ಮುಂದೂಡಲಾಗಿದೆ. ಅಲ್ಲದೆ ದೋಷಾರೋಪ ನಿಗದಿ ಮಾಡುವ ದಿನದಂದು ಕಡ್ಡಾಯವಾಗಿ ಎಲ್ಲಾ ಆರೋಪಿಗಳು ಹಾಜರಿರಬೇಕು ಎಂದು ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
ರೇಣುಕಾ ಸ್ವಾಮಿ ಸಾವನ್ನಪ್ಪಿದ ಸುಮಾರು ಒಂದೂವರೆ ವರ್ಷದ ನಂತರ ಇದೀಗ ದೋಷಾರೋಪ ನಿಗದಿಯಾಗಲಿದೆ. ನ. 3 ರಂದು ದರ್ಶನ್ ಹಾಗೂ ಇತರೆ ಆರೋಪಿಗಳ ಮೇಲೆ ಪೊಲೀಸರು ಹೇರಿರುವ ಆರೋಪಗಳನ್ನು ಆರೋಪಿಗಳಿಗೆ ಓದಿ ಹೇಳಲಾಗುತ್ತದೆ. ಬಳಿಕ ನ್ಯಾಯಾಧೀಶರು ಈ ಆರೋಪಗಳನ್ನು ಒಪ್ಪಿಕೊಳ್ಳುತ್ತೀರೆಯೇ ಎಂದು ಆರೋಪಿಗಳನ್ನು ಪ್ರಶ್ನಿಸುತ್ತಾರೆ. ಒಂದು ವೇಳೆ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಂಡಲ್ಲಿ ಶಿಕ್ಷೆ ಪ್ರಕಟವಾಗಲಿದೆ.
ಒಂದೊಮ್ಮೆ ಆರೋಪಿಗಳು ಆರೋಪಗಳನ್ನು ನಿರಾಕರಿಸಿದರೆ ಸಾಕ್ಷ್ಯಗಳ ವಿಚಾರಣೆ ನಡೆಯಲಿದೆ. ಸಾಕ್ಷ್ಯಗಳ ವಿಚಾರಣೆಗೆ ದಿನಾಂಕವನ್ನು ನಿಗದಿ ಪಡಿಸಲಾಗುತ್ತದೆ. ಈ ಪ್ರಕರಣದಲ್ಲಿ ಸಾಕಷ್ಟು ಸಂಖ್ಯೆಯ ಸಾಕ್ಷ್ಯಗಳು ಇರುವ ಕಾರಣ ಸಹಜವಾಗಿಯೇ ಎಲ್ಲರ ವಿಚಾರಣೆ, ಮರು ವಿಚಾರಣೆಗಳಿಗೆ ಸುಮಾರು ಒಂದರಿಂದ ಎರಡು ವರ್ಷ ಸಮಯ ಬೇಕಾಗುವ ಸಾಧ್ಯತೆ ಇದೆ.
 
				 
         
         
         
															 
                     
                     
                     
                     
                    

































 
    
    
        