ಚಿತ್ರದುರ್ಗ : ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರಿಗೆ ತಿಂಗಳ 5 ನೇ ತಾರೀಖಿನ ಒಳಗಾಗಿ ತಪ್ಪದೇ ವೇತನ ಪಾವತಿ ಮಾಡಬೇಕು. ಇ.ಎಸ್.ಐ. ಪಿಫ್ ಜಮಾ ಕುರಿತು ಸಂಬಂಧಪಟ್ಟ ಏಜೆನ್ಸಿಯಿಂದ ಮಾಹಿತಿ ಪಡೆದುಕೊಳ್ಳಬೇಕು. ಪೌರ ಕಾರ್ಮಿಕರಿಗೆ ವೇತನ ಪ್ರಮಾಣ ಪತ್ರವನ್ನು ನೀಡಬೇಕು ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೊಗದ ಅಧ್ಯಕ್ಷ ರಘು.ಪಿ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸ್ವಚ್ಛತಾ ಹಾಗೂ ಪೌರ ಕಾರ್ಮಿಕರಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯ ಪೌರ ಕಾರ್ಮಿಕರಿಗೆ ನಿವೇಶನ ನೀಡಲು ಜಾಗ ಗುರುತಿಸಿ ಮೀಸಲು ಇಡಬೇಕು. ಪೌರ ಕಾರ್ಮಿರೊಂದಿಗಿನ ಸಂವಾದಲ್ಲಿ ಸಾಕಷ್ಟು ಸಮಸ್ಯೆಗಳು ಕೇಳಿಬಂದಿವೆ. ನಗರಸಭೆಗಳಲ್ಲಿ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಸಮವಸ್ತ್ರಗಳನ್ನು ವಿತರಣೆ ಮಾಡಿಲ್ಲ. ನೇಮಕಾತಿಗೊಂಡು ಎರಡು ವರ್ಷಗಳಾದವರಿಗೆ ಪ್ರೊಬೆಷನರಿ ಅವಧಿ ಘೋಷಿಸಿಲ್ಲ. ವೈದ್ಯಕೀಯ ತಪಾಸಣೆ ವರದಿ ಪೌರ ಕಾರ್ಮಿಕರ ಕೈಗೆ ನೀಡುತ್ತಿಲ್ಲ. ಪೌಷ್ಠಿಕ ಉಪಹಾರ, ಶುದ್ಧ ಕುಡಿಯುವ ನೀರು ಸಹ ನೀಡದೆ ಅಸಡ್ಡೆ ಮಾಡುತ್ತಿರುವುದಾಗಿ ಸಾಕಷ್ಟು ಪೌರಕಾರ್ಮಿಕರು ಅಹವಾಲು ಹೇಳಿಕೊಂಡಿದ್ದಾರೆ.
ಪೌರಕಾರ್ಮಿರನ್ನು ಸಹ ವಿಶ್ವಾಸದಿಂದ ಕಂಡು ಅವರ ಅಹವಾಲುಗಳನ್ನು ಆಲಿಸಿದರೆ, ಈ ಎಲ್ಲಾ ಸಮಸ್ಯೆಗಳನ್ನು ಅಧಿಕಾರಿಗಳು ತಮ್ಮ ಹಂತದಲ್ಲಿಯೇ ಬಗೆಹರಿಸಬಹುದು. ಆದರೆ ಅಧಿಕಾರಿಗಳ ತಪ್ಪು ಮನೋಧೋರಣೆಯಿಂದಾಗಿ ಆಯೋಗಕ್ಕೆ ಇಂತಹ ದೂರುಗಳನ್ನು ಸ್ವೀಕರಿಸುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆ ಹಾಗೂ ಸ್ವಚ್ಛತಾ ಕೆಲಸ ಮಾಡುವ ಇತರೆ ಇಲಾಖೆಗಳು ಇಂತಹ ಸಮಸ್ಯೆಗಳಿಗೆ ಇತಿಶ್ರೀ ಹಾಡಬೇಕು. ಇಲ್ಲವಾದರೆ ಆಯೋಗ ಅಧಿಕಾರಿಗಳ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಲಿದೆ ಎಂದು ಅಧ್ಯಕ್ಷ ರಘು.ಪಿ ಎಚ್ಚರಿಸಿದರು.































