ಚಿತ್ರದುರ್ಗ : ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ನೀಡದ ಅನಿಷ್ಠ ಸರ್ಕಾರದ ವಿರುದ್ದ ಎಐಟಿಯುಸಿ.ಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಬಿಸಿಯೂಟ ತಯಾರಕರ ಸಹಾಯಕ ನಿರ್ದೇಶಕ ಗುರುರಾಜ್ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಮನವಿ ಸಲ್ಲಿಸಲಾಯಿತು.
ದಾವಣಗೆರೆ ರಸ್ತೆಯಲ್ಲಿರುವ ಕಮ್ಯುನಿಸ್ಟ್ ಕಚೇರಿಯಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಎ.ಐ.ಟಿ.ಯು.ಸಿ. ಪ್ರಧಾನ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್ಬಾಬು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಕಳೆದ 23 ವರ್ಷಗಳಿಂದಲೂ ರಾಜ್ಯದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರು ಮಾಡುತ್ತಿದ್ದಾರೆ. ಕನಿಷ್ಟ ವೇತನ, ಜೀವನ ಭದ್ರೆತೆಯಿಲ್ಲದೆ ಮಧ್ಯಾಹ್ನ 2 ಗಂಟೆವರೆಗೆ ದುಡಿಯುತ್ತಿರುವವರಿಗೆ ಹೆಚ್ಚುವರಿಯಾಗಿ ಸಂಜೆ ನಾಲ್ಕು ಗಂಟೆವರೆಗೆ ಕೆಲಸ ಮಾಡಿ ತಿಂಗಳಿಗೆ ಐದು ನೂರು ರೂ.ಗಳನ್ನು ಜಾಸ್ತಿಕೊಡುವುದಾಗಿ ರಾಜ್ಯ ಸರ್ಕಾರ ಹೇಳಿರುವುದು ನಾಚಿಕೆಗೇಡಿನ ಸಂಗತಿ. ಜಾತಿ ಗಣತಿ ಸಮೀಕ್ಷೆಯಲ್ಲಿ ತೊಡಗಿದ ಶಿಕ್ಷಕರುಗಳಿಗೆ 20 ಸಾವಿರ ರೂ.ಗಳನ್ನು ನೀಡುತ್ತಿರುವ ಸರ್ಕಾರ ಅವರ ಜೊತೆಗೆ ಹೋಗುವ ಅಂಗನವಾಡಿ ಕಾರ್ಯಕರ್ತರಿಗೆ ಯಾವ ಪಗಾರವೂ ಕೊಡುತ್ತಿಲ್ಲ. ಬಿಸಿಯೂಟ ತಯಾರಕರಿಗೆ ಹೆಚ್ಚುವರಿ ಕೆಲಸದ ಹೊರೆ ಹೇರಬಾರದೆಂದು ಎಚ್ಚರಿಸಿದರು.
ಚಿಕ್ಕಮಗಳೂರು ಜಿಲ್ಲೆ ಎಐಟಿಯುಸಿ. ಮುಖಂಡ ವಿಜಯಕುಮಾರ್ ಮಾತನಾಡಿ ಜಿಲ್ಲೆಯ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಿದೆ ಎಂದು ಬಿಸಿಯೂಟ ತಯಾರಕರನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ಮಕ್ಕಳ ಹಾಜರಾತಿ ಹೆಚ್ಚಿರುವ ಶಾಲೆಗಳಲ್ಲಿ ಬಿಸಿಯೂಟ ತಯಾರಕರು ಇಬ್ಬರು ಇಲ್ಲವೇ ಮೂವರಿದ್ದಾರೆ. ಮಕ್ಕಳಿಗೆ ಹಾಲು ರಾಗಿ ಮಾಲ್ಟ್ ಕೊಡುವ ಕೆಲಸ ಮಾಡಬೇಕಿದೆ. ಬೇಯಿಸಿದ ಒಂದು ಮೊಟ್ಟೆ ಸುಲಿಯಲು ಒಂದು ರೂ. ಕೊಡಬೇಕು. ಕೆಲವು ಶಾಲೆಗಳಲ್ಲಿ ಬಿಸಿಯೂಟ ತಯಾರಕರನ್ನು ಶೌಚಾಲಯ ಸ್ವಚ್ಚಗೊಳಿಸಲು ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.
ಎಐಟಿಯುಸಿ. ತಾಲ್ಲೂಕು ಅಧ್ಯಕ್ಷ ಕಾಂ.ಟಿ.ಆರ್.ಉಮಾಪತಿ ಮಾತನಾಡುತ್ತ ಜಿಲ್ಲೆಯಲ್ಲಿ ನಿವೃತ್ತಿಯಾಗಿರುವ ಬಿಸಿಯೂಟ ತಯಾರಕರಿಗೆ ಇಂಡಿಗಂಟು ಇನ್ನು ಸಿಕ್ಕಿಲ್ಲ. ಕೂಡಲೆ ಇಡಿಗಂಟು ನೀಡಬೇಕು. ಸಂಜೆ 4-30 ರತನಕ ಶಾಲೆಯಲ್ಲಿದ್ದು, ಮಕ್ಕಳಿಗೆ ಸ್ನ್ಯಾಕ್ಸ್ ನೀಡುವಂತೆ ಬಿಸಿಯೂಟ ತಯಾರಕರಿಗೆ ಸರ್ಕಾರ ಸೂಚಿಸಿದೆ. ಕೂಡಲೆ ಇದನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಕಾಂ.ಕೆ.ಈ.ಸತ್ಯಕೀರ್ತಿ, ಕಾಂ.ಫರ್ವಿನ್ಬಾನು, ಕಾಂ.ಕಾಂತಮ್ಮ, ಕಾಂ.ರಜೀಯಾ, ಕಾಂ.ಶಾಂತಮ್ಮ, ಕಾಂ.ನಾಗಮ್ಮ, ಕಾಂ.ಗಿರಿಜಮ್ಮ, ಕಾಂ.ಸುವರ್ಣಮ್ಮ, ಕಾಂ.ದ್ರಾಕ್ಷಾಯಿಣಮ್ಮ
ಕಾಂ.ಎನ್.ಸಿ.ಕುಮಾರಸ್ವಾಮಿ ಸೇರಿದಂತೆ ನೂರಾರು ಬಿಸಿಯೂಟ ತಯಾರಕಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
				
															
                    
                    
                    
                    
































