ಬೆಳಗಾವಿ: ಹಿಂದೆ ಯಾವುದೇ ರಾಜ್ಯ ಸರಕಾರಗಳು ರೈತರ ಹೋರಾಟದ ವಿಚಾರದಲ್ಲಿ ಇಷ್ಟೊಂದು ಕೆಟ್ಟದಾಗಿ ನಡೆದುಕೊಂಡಿರಲಿಲ್ಲ; ಸರಕಾರಕ್ಕೆ ಅಧಿಕಾರದ ಮದ ಏರಿದ್ದು, ಅದರಿಂದ ಈ ರೀತಿ ಮಾಡುತ್ತಿರುವಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಕಬ್ಬು ಬೆಳೆಗಾರರ ಹೋರಾಟದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿ ಬೆಳಗಾವಿಯ ಕೆಎಲ್‍ಇ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿರುವ ರೈತನನ್ನು ಹಾಗೂ ಅವರ ಕುಟುಂಬಸ್ಥÀರನ್ನು ವಿಜಯೇಂದ್ರ ಹಾಗೂ ಮುಖಂಡರು ಭೇಟಿ ಮಾಡಿದರು.
ಬಳಿಕ ವಿಜಯೇಂದ್ರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಕಬ್ಬು ಬೆಳೆಗಾರರ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಆ ಕುಟುಂಬದ ಕುರಿತು ಗಮನಿಸಬೇಕು ಎಂದು ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರವು ಕಬ್ಬು ಬೆಳೆಗಾರರ ವಿಚಾರದಲ್ಲಿ ಸರಕಾರವು ಕಣ್ಣಿದ್ದೂ ಕುರುಡನಂತೆ, ಕಿವಿಯಿದ್ದೂ ಕಿವುಡನಂತೆ ವರ್ತಿಸುತ್ತಿತ್ತು. ಇದನ್ನು ಗಮನಿಸಿ ನಾನು ಮತ್ತು ಪಕ್ಷದ ನಾಯಕರು ಹೋರಾಟದಲ್ಲಿ ಭಾಗವಹಿಸಿದ್ದಾಗಿ ತಿಳಿಸಿದರು.
ನಿನ್ನೆ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿದ್ದೇನೆ. ಇವತ್ತು ಕೂಡ ಹೋರಾಟದಲ್ಲಿ ಭಾಗವಹಿಸಿದ್ದೇವೆ. ಈ ಮೂಲಕ ಧೈರ್ಯ ತುಂಬಿಸಲು ಪ್ರಯತ್ನಿಸಿದ್ದಾಗಿ ವಿವರಿಸಿದರು. ಹೆಚ್ಚಿನ ಪ್ರಚಾರ ನೀಡಿದ ಮಾಧ್ಯಮಗಳನ್ನು ಅವರು ಅಭಿನಂದಿಸಿದರು.
































