ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ಅಭಿವೃದ್ಧಿ ಆಗಬಾರದು ಎಂದು ಬಿಜೆಪಿ ಕುತಂತ್ರ ನಡೆಸುತ್ತಿದೆ, ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬಿಜೆಪಿಯವರಿಗೆ ಬೆಂಗಳೂರಿನ ಅಭಿವೃದ್ಧಿ ಬೇಡವಾಗಿದೆ. ಡಿ.ಕೆ. ಶಿವಕುಮಾರ್ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ನೀಡಲು ಮುಂದಾಗಿದ್ದರೆ, ಅದನ್ನು ವಿರೋಧಿಸುತ್ತಾ ಅಸೂಯೆ ವ್ಯಕ್ತಪಡಿಸುತ್ತಿದ್ದಾರೆ,” ಎಂದು ಟೀಕಿಸಿದರು. ಅವರು ಮುಂದುವರಿಸಿ, “ಬಿಜೆಪಿ ನಾಯಕರು ಟನಲ್ ರಸ್ತೆ ಬದಲು ಸಾರ್ವಜನಿಕರು ಸಮೂಹ ಸಾರಿಗೆ ಬಳಸಲಿ ಎಂದು ಹೇಳುತ್ತಾರೆ. ಹಾಗಾದರೆ ಸಂಸದ ತೇಜಸ್ವಿ ಸೂರ್ಯ ಮೊದಲು ತಮ್ಮ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಕಾರು ಖರೀದಿ ಮಾಡಬೇಡಿ ಎಂದು ಕರೆ ನೀಡಲಿ,” ಎಂದು ಕಿಡಿಕಾರಿದರು.
ಡಿ.ಕೆ. ಸುರೇಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಿಲುವಿನ ಮೇಲೂ ಟೀಕೆ ಮಾಡಿದ್ದಾರೆ. “ಪ್ರಧಾನಿ ಮೋದಿ ಟನಲ್ ರಸ್ತೆ ಮಾಡಿದರೆ ಅದನ್ನು ಚಮತ್ಕಾರ ಎನ್ನುವವರು, ಕಾಂಗ್ರೆಸ್ ಸರ್ಕಾರ ಮಾಡಿದರೆ ಬಲಾತ್ಕಾರ ಎಂದು ಹೇಳುತ್ತಾರೆ. ಮುಂಬೈನಲ್ಲಿ ಟನಲ್ ರಸ್ತೆ ಮಾಡಲಾಗಿದೆ, ಅದರ ಬಗ್ಗೆ ಮಾತನಾಡುವುದಿಲ್ಲ,” ಎಂದು ವ್ಯಂಗ್ಯವಾಡಿದರು. “ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಷಡ್ಯಂತ್ರ ಮಾಡಲಾಗುತ್ತಿದೆ. ಸಿಎಂ ಹಾಗೂ ಡಿಸಿಎಂ ಸಂಚಾರ ದಟ್ಟಣೆಗೆ ಪರಿಹಾರ ನೀಡಲು ಹೊರಟರೆ, ಅಸೂಯೆಯಿಂದ ವಿರೋಧಿಸುತ್ತಿದ್ದಾರೆ,” ಎಂದು ಆರೋಪಿಸಿದರು.
































