ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ರ ಇಂದು ನಿಧನ ಹೊಂದಿದ್ದಾರೆ. ‘ಓಂ’, ‘ನಲ್ಲ’, ‘ಕೆಜಿಎಫ್’, ‘ಕೆಜಿಎಫ್ 2’ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ತಮ್ಮ ಶಕ್ತಿಶಾಲಿ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದ ಅವರು, ಕಳೆದ ಕೆಲವು ವರ್ಷಗಳಿಂದ ಥೈರಾಯ್ಡ್ ಕ್ಯಾನ್ಸರ್ನೊಂದಿಗೆ ಹೋರಾಟ ನಡೆಸುತ್ತಿದ್ದರು.
ಹರೀಶ್ ರಾಯ್ ಅವರ ಆರೋಗ್ಯ ಕಳೆದ ತಿಂಗಳುಗಳಿಂದ ಹದಗೆಡುತ್ತಲೇ ಇತ್ತು. ಹೊಟ್ಟೆ ಉಬ್ಬರಗೊಂಡು ದೇಹ ಕೃಷಗೊಂಡಿದ್ದ ಅವರು ಗುರುತೇ ಸಿಗದಷ್ಟು ಬದಲಾವಣೆಗೆ ಒಳಗಾಗಿದ್ದರು. ತಮ್ಮ ಚಿಕಿತ್ಸೆಗೆ ಸಹಾಯಕ್ಕಾಗಿ ಅವರು ಸಾರ್ವಜನಿಕವಾಗಿ ಮನವಿ ಮಾಡಿದ್ದರು. ಈ ವೇಳೆ ನಟ ಯಶ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್, ದರ್ಶನ್ ಅಭಿಮಾನಿ ಬಳಗ ಸೇರಿದಂತೆ ಹಲವರು ಆರ್ಥಿಕ ಸಹಾಯ ಹಸ್ತ ಚಾಚಿದ್ದರು.
ತಮ್ಮ ಜೀವನದ ಕೊನೆಯ ದಿನಗಳವರೆಗೂ ಹೋರಾಟ ತೊರೆಯದ ಹರೀಶ್ ರಾಯ್ ಅವರನ್ನು ಹಲವಾರು ಸಿನಿತಾರೆಯರು ಭೇಟಿ ಮಾಡಿ ಧೈರ್ಯ ತುಂಬಿದ್ದರು. ಹಲವು ಯೂಟ್ಯೂಬರ್‌ಗಳೂ ಸಹ ಅವರ ಬಳಿಗೆ ತೆರಳಿ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಚಿರನಿದ್ರೆಗೆ ಶರಣಾಗಿದ್ದಾರೆ.
ಕರಾವಳಿ ಮೂಲದ ಹರೀಶ್ ರಾಯ್ ಅವರು 90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ಖಳನಟರಾಗಿ ಹೊರಹೊಮ್ಮಿದ್ದರು. ‘ಓಂ’, ‘ಜೋಡಿ ಹಕ್ಕಿ’, ‘ತಾಯವ್ವ’, ‘ನಲ್ಲ’, ‘ಜಾಫರ್ ಅಲಿಯಾಸ್ ಮುರ್ಗಿ ಜಾಫರ್’, ‘ಭೂಗತ’, ‘ರಾಜ್ ಬಹದ್ದೂರ್’, ‘ಸಂಜು ವೆಡ್ಸ್ ಗೀತಾ’, ‘ಕೆಜಿಎಫ್ ಚಾಪ್ಟರ್ 1 ಮತ್ತು 2’ ಸೇರಿದಂತೆ ಅನೇಕ ಚಿತ್ರಗಳಲ್ಲಿ ತಮ್ಮ ವಿಶಿಷ್ಟ ಅಭಿನಯದಿಂದ ಸ್ಯಾಂಡಲ್‌ವುಡ್‌ನಲ್ಲಿ ಛಾಪು ಮೂಡಿಸಿದ್ದರು.
ಹರೀಶ್ ರಾಯ್ ಅವರು ತಮಿಳು ಚಿತ್ರರಂಗದಲ್ಲಿಯೂ ಅಭಿನಯಿಸಿದ್ದರು. ಕೆಲವು ವರ್ಷಗಳ ಹಿಂದೆ ಒಂದು ಪ್ರಕರಣದ ಹಿನ್ನೆಲೆ ಜೈಲು ಪಾಲಾಗಿದ್ದ ಸಂದರ್ಭದಲ್ಲೂ, ತಮ್ಮ ಜೀವನದ ಕಷ್ಟದ ದಿನಗಳನ್ನು ಅವರು ಸ್ವತಃ ಸ್ಮರಿಸಿಕೊಂಡು ಭಾವುಕರಾಗಿದ್ದರು. ಅವರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರ ನಿಧನ ತುಂಬಲಾರದ ನಷ್ಟವನ್ನುಂಟುಮಾಡಿದೆ. ಸ್ಯಾಂಡಲ್‌ವುಡ್‌ನ “ಖಳನಟ” ಎಂದು ಕರೆಯಲ್ಪಟ್ಟ ಈ ಸರಳ ವ್ಯಕ್ತಿ, ತಮ್ಮ ಬದುಕಿನ ಕೊನೆಯ ಕ್ಷಣವರೆಗೂ ಹೋರಾಡಿದ ಧೈರ್ಯಶಾಲಿ ಕಲಾವಿದನಾಗಿ ಅಭಿಮಾನಿಗಳ ಮನಗಳಲ್ಲಿ ಶಾಶ್ವತವಾಗಿ ಉಳಿಯುತ್ತಾರೆ.

































