ಮುಂಬೈ: ಬ್ಯಾಂಕುಗಳು ಸ್ಥಳೀಯ ಭಾಷೆ ಬಲ್ಲವರನ್ನು ನೇಮಕ ಮಾಡಿಕೊಳ್ಳಬೇಕು. ಅವರ ಸ್ಥಳೀಯ ಭಾಷಾ ಜ್ಞಾನದ ಆಧಾರದ ಮೇಲೆ ಅವರ ವೃತ್ತಿಪರತೆ ಅಳೆಯಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
12ನೇ ಎಸ್.ಬಿ.ಐ. ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಶಾಖೆಯಲ್ಲಿ ನೇಮಿಸಲಾದ ಎಲ್ಲಾ ಸಿಬ್ಬಂದಿಗೆ ಅಲ್ಲಿನ ಜನ ಮತ್ತು ಅವರು ಆಡುವ ಭಾಷೆಯನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರಬೇಕು ಎಂದು ತಿಳಿಸಿದ್ದಾರೆ.
ಕನ್ನಡಿಗರು ಬ್ಯಾಂಕಿಗೆ ಹೋದಾಗ ಹಿಂದಿಯಲ್ಲಿ ಉತ್ತರಿಸುತ್ತಿದ್ದ ಹಲವು ಪ್ರಕರಣ ಬೆಳಕಿಗೆ ಬಂದಿದ್ದವು. ಕನ್ನಡ ಗ್ರಾಹಕರು ಬ್ಯಾಂಕ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ್ದರು. ಸ್ಥಳೀಯ ಭಾಷೆ ಗೊತ್ತಿಲ್ಲದವರನ್ನು ಬ್ಯಾಂಕುಗಳಿಗೆ ನೇಮಿಸುತ್ತಿರುವ ಬಗ್ಗೆ ದಕ್ಷಿಣ ಭಾರತದ ಹಲವು ಕಡೆ ಆಕ್ರೋಶ ವ್ಯಕ್ತವಾಗಿತ್ತು. ಅನ್ಯಭಾಷಿಕ ಬ್ಯಾಂಕ್ ಸಿಬ್ಬಂದಿ ಸ್ಥಳೀಯರ ನಡುವೆ ಜಟಾಪಟಿ ನಡೆದಿತ್ತು.
ಈಗ ಬ್ಯಾಂಕಿಂಗ್ ಸಮಾವೇಶದಲ್ಲಿ ಬ್ಯಾಂಕುಗಳಿಗೆ ಈ ಬಗ್ಗೆ ಕಿವಿ ಹಿಂಡಿ ಹೇಳಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬ್ಯಾಂಕಿನ ಉನ್ನತ ಅಧಿಕಾರಿಗಳಿಗೆ ಸ್ಥಳೀಯ ಭಾಷೆ ಗೊತ್ತಿಲ್ಲದಿದ್ದರೂ ಪರವಾಗಿಲ್ಲ. ಶಾಖೆಗಳಲ್ಲಿ ಇರುವವರಿಗೆ ಸ್ಥಳೀಯ ಭಾಷೆ ತಿಳಿದಿರಬೇಕು. ಸ್ಥಳೀಯ ಭಾಷೆ ಆಡುವವರನ್ನು ಬ್ಯಾಂಕ್ ಶಾಖೆಗಳ ಹುದ್ದೆಗಳಿಗೆ ನಿಯೋಜಿಸುವಂತೆ ಸೂಚಿಸಿದ್ದಾರೆ.
.
































