ಸೀತಾಮರ್ಹಿ : ‘ತಲೆಗೆ ಬಂದೂಕು ಇಡುವ ಸರ್ಕಾರ ಜನರಿಗೆ ಬೇಡ. ಮಕ್ಕಳಿಗೆ ಶಾಲೆ, ಕಂಪ್ಯೂಟರ್, ಕ್ರಿಕೆಟ್ ಬ್ಯಾಟ್ ಹಾಗೂ ಹಾಕಿ ಸ್ಟಿಕ್ ಹೊಂದಲು ಉತ್ತೇಜಿಸುವ ಎನ್‌ಡಿಎ ಸರ್ಕಾರವನ್ನು ಅಪೇಕ್ಷಿಸುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನಸಭಾ ಚುನಾವಣೆ ನಡೆಯುತ್ತಿರುವ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ರ‍್ಯಾಲಿಯನ್ನುದ್ದೇಶಿಸಿ ಶನಿವಾರ ಮಾತನಾಡಿದ ಅವರು, ಆರ್‌ಜೆಡಿ ನೇತೃತ್ವದ ಮಹಾ ಘಟಬಂಧನ್ ಅನ್ನು ಜನರು ಖಂಡಿತವಾಗಿಯೂ ಮತ ನೀಡಿ ಬೆಂಬಲಿಸುವುದಿಲ್ಲ. ಏಕೆಂದರೆ ಇವರು ಅಧಿಕಾರಕ್ಕೆ ಬಂದರೆ ಜನರ ತಲೆಗೆ ‘ಕಟ್ಟಾ’ (ದೇಸಿ ಬಂದೂಕು) ಇಟ್ಟು, ಕೈ ಎತ್ತಲು ಹೇಳುತ್ತಾರೆ. ನಮಗೆ ಇಂಥ ‘ಕಟ್ಟಾ ಸರ್ಕಾರ್’ ಬೇಡ. ನಮಗೆ ಮತ್ತೆ ಎನ್‌ಡಿಎ ಸರ್ಕಾರ ಬೇಕು’ ಎಂಬ ಘೋಷಣೆ ಕೂಗಿದರು.
‘ಎನ್‌ಡಿಎ ಸರ್ಕಾರದಲ್ಲಿ ಸ್ಟಾರ್ಟ್ಅಪ್ ಉದ್ಯಮಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ನಡೆಯುತ್ತಿದೆ. ಶಿಕ್ಷಣ ಮತ್ತು ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದರೆ ಮತ್ತೊಂದೆಡೆ ಆರ್‌ಜೆಡಿಯು ಮಕ್ಕಳನ್ನು ‘ರಂಗ್ವಾರ್’ (ಬೀದಿ ಗೂಳಿ) ಅನ್ನಾಗಿ ಬೆಳೆಯುವಂತೆ ಕರೆ ನೀಡುತ್ತಿದೆ. ಹೀಗೆ ಬಂದೂಕು ಸಂಸ್ಕೃತಿಯ ಹಾಗೂ ದುರಾಡಳಿತ ನಡೆಸುವ, ಹಿಂಸಾಚಾರದಲ್ಲಿ ತೊಡಗುವ ಭ್ರಷ್ಟರನ್ನು ಅಧಿಕಾರಕ್ಕೆ ತರಬೇಡಿ’ ಎಂದು ಹೇಳಿದರು.
‘ತಲೆಗೆ ಬಂದೂಕು ಇಡುವ ಸರ್ಕಾರ ಜನರಿಗೆ ಬೇಡ. ಮಕ್ಕಳಿಗೆ ಶಾಲೆ, ಕಂಪ್ಯೂಟರ್, ಕ್ರಿಕೆಟ್ ಬ್ಯಾಟ್ ಹಾಗೂ ಹಾಕಿ ಸ್ಟಿಕ್ ಹೊಂದಲು ಉತ್ತೇಜಿಸುವ ಎನ್‌ಡಿಎ ಸರ್ಕಾರವನ್ನು ಅಪೇಕ್ಷಿಸುತ್ತಿದ್ದಾರೆ. ಮೊದಲ ಹಂತದ ಮತದಾನದಲ್ಲಿ ಶೇ 65.08ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಇದು ವಿರೋಧಿಗಳಿಗೆ 65 ವೋಲ್ಟ್ ನ ಆಘಾತ ನೀಡಿದಂತಾಗಿದೆ. ಹೀಗಾಗಿ ಅವರು ನಿದ್ರೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.
“ಮುಖ್ಯಮಂತ್ರಿ ಮಹಿಳಾ ಉದ್ಯಮಿ ಯೋಜನೆ ಮೂಲಕ ಪ್ರತಿ ಮಹಿಳೆಯ ಖಾತೆಗೆ 10,000 ರೂ. ಹಣವನ್ನು ನೇರ ವರ್ಗಾವಣೆ ಮಾಡಲಾಗಿದೆ. ‘ಜಂಗಲ್ ರಾಜ್’ ನಡೆಸುವವರು ಇದನ್ನು ಎಂದಿಗೂ ಊಹಿಸಿರಲಿಲ್ಲ. ಕಾಂಗ್ರೆಸ್‌ನ ನಾಮ್‌ದಾರ್ (ರಾಹುಲ್ ಗಾಂಧಿ) ಅವರ ತಂದೆ (ರಾಜೀವ್ ಗಾಂಧಿ) ಹಿಂದೆ ಪ್ರಧಾನಿಯಾಗಿದ್ದಾಗ ಒಂದು ಮಾತು ಹೇಳಿದ್ದರು. ಸರ್ಕಾರ ನೀಡುವ ಪ್ರತಿ 1 ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಜನರನ್ನು ತಲುಪುತ್ತಿದೆ. ಈ ಲೂಟಿಯ ಹಿಂದೆ ರಕ್ತಸಿಕ್ತ ಕೈಗಳಿವೆ” ಎಂದರು.

































