ಚಿತ್ರದುರ್ಗ : ಕಾಲ ಕಾಲಕ್ಕೆ ಲಸಿಕೆಯನ್ನು ಹಾಕಿಸುವ ಮೂಲಕ ರೈತರು ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳಬೇಕೆಂದು ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಜಿ.ಬಿ.ಶೇಖರ್ ಕರೆ ನೀಡಿದರು.
ಹೊಳಲ್ಕೆರೆ ತಾಲ್ಲೂಕಿನಲ್ಲಿ ರಾಸುಗಳಿಗೆ ಎಂಟನೆ ಸುತ್ತಿನ ಉಚಿತ ಕಾಲುಬಾಯಿ ಜ್ವರದ ಲಸಿಕೆ ಅಭಿಯಾನ ಉದ್ಗಾಟಿಸಿ ಮಾತನಾಡಿದರು.
ಗೊರಸುಗಳಿರುವ ಪ್ರಾಣಿಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಳ್ಳುತ್ತದೆ. ಇದೊಂದು ವೈರಸ್ ಕಾಯಿಲೆಯಾಗಿರುವುದರಿಂದ ಮುಂಜಾಗ್ರತೆಯಾಗಿ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳಬೇಕು. ಕಾಲುಬಾಯಿ ಜ್ವರಕ್ಕೆ ತುತ್ತಾಗುವ ಹಸುಗಳಲ್ಲಿ ಹಾಲಿನ ಪ್ರಮಾಣ ಕಡಿಮೆಯಾಗಿ ರೈತ ನಷ್ಟಕ್ಕೊಳಗಾಗುತ್ತಾನೆ. ಈ ರೋಗದ ವಿರುದ್ದ ಎಚ್ಚರಿಕೆಯಿಂದಿದ್ದು, ಒಂದು ತಿಂಗಳ ಕಾಲ ನಡೆಯುವ ಲಸಿಕಾ ಅಭಿಯಾನವನ್ನು ರೈತರು ಪ್ರಯೋಜನ ಪಡೆದುಕೊಂಡು ಜಾನುವಾರುಗಳನ್ನು ರಕ್ಷಿಸಿಕೊಳ್ಳುವಂತೆ ಸಲಹೆ ನೀಡಿದರು.
ಹೊಳಲ್ಕೆರೆ ತಾಲ್ಲೂಕು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಂಗಸ್ವಾಮಿ ಎಂ, ವೈದ್ಯರು ಮತ್ತು ಸಿಬ್ಬಂದಿ. ಚಿತ್ರಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಶಿಕುಮಾರ್ ಹಾಗೂ ಶಿವಮೊಗ್ಗ ಹಾಲು ಒಕ್ಕೂಟದವರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
































