ವಾರಾಣಸಿ: ಹೊಸ ಪೀಳಿಗೆಯ ರೈಲು ಬೋಗಿಗಳನ್ನು ಅಳವಡಿಸುವ ಮೂಲಕ ವಂದೇ ಭಾರತ್ ಹಾಗೂ ಅಮೃತ ಭಾರತ ರೈಲುಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ವಾರಾಣಸಿಯ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರೈಲ್ವೆ ಸುರಕ್ಷತೆಗೆ ದೀರ್ಘಕಾಲೀನ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿಯೇ ಜಾರಿಗೆ ತರಲಾಗುವುದು. ದೇಶದ ವಿವಿಧ ಭಾಗಗಳಿಂದ ಕಾಶಿಗೆ ತೆರಳಲಿರುವ ರೈಲುಗಳ ಸಂಖ್ಯೆಯನ್ನು, 150 ರಿಂದ 450ಕ್ಕೆ ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ. ಇದಕ್ಕೆ ಪೂರಕವಾಗಿ ವಾರಾಣಸಿಯ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತದೆ” ಎಂದರು.
“ವಂದೇ ಭಾರತ ರೈಲುಗಳ ಸಂಚಾರ ಆರಂಭಿಸಿದ ನಂತರ, ದೇಶಾದ್ಯಂತ 7.25 ಕೋಟಿ ಪ್ರಯಾಣಿಕರು ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಬೋಗಿಗಳಲ್ಲಿ ಗಾಳಿ ಶುದ್ಧೀಕರಣ ಯಂತ್ರಗಳನ್ನು ಅಳವಡಿಸಿ, ಶೇಕಡ ನೂರರಷ್ಟು ವೈರಸ್ ಮುಕ್ತವಾಗಿರುವಂತೆ ಕ್ರಮಕೈಗೊಳ್ಳಲಾಗಿದೆ. ರೈಲುಗಳಲ್ಲಿ ಶೌಚಾಲಯಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಹವಾ ನಿಯಂತ್ರಣ ವ್ಯವಸ್ಥೆಯನ್ನು ಉತ್ತಮ ಪಡಿಸಲಾಗಿದೆ. ರೈಲ್ವೆ ಹಳಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ದೇಶಾದ್ಯಂತ ಸಾವಿರದ 300 ರೈಲ್ವೆ ನಿಲ್ದಾಣಗಳ ಪುನರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ” ಎಂದು ಹೇಳಿದರು.
































