ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೋಂದಣಿ ಆಗಿಲ್ಲ ಎಂದ ಸಚಿವ ಪ್ರಿಯಾಂಕ್ ಖರ್ಗೆ ಮಾತಿಗೆ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೇ ಸಂಘದ ಮೇಲಿನ ಹಲವು ಆರೋಪಗಳ ಬಗ್ಗೆ ಕೂಡ ಮಾತಾಡಿದ್ದಾರೆ. ಆರ್ಎಸ್ಎಸ್ ಶತಮಾನೋತ್ಸವ ಹಿನ್ನೆಲೆ ಹೊಸಕೆರೆಹಳ್ಳಿಯ PES ಕಾಲೇಜು ಸಭಾಂಗಣದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ನಿನ್ನೆ ಉಪನ್ಯಾಸ ನೀಡಿದ್ದರು.
ಇಂದು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳ ರಾಜ್ಯದಿಂದ ಆಗಮಿಸಿರುವ ವಿವಿಧ ಕ್ಷೇತ್ರಗಳ ಆಹ್ವಾನಿತರ ಪ್ರಶ್ನೆಗೆ ಅವರು ಉತ್ತರ ನೀಡಿದ್ದು, ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. RSS ಸ್ಥಾಪನೆ ಆಗಿದ್ದು 1925ರಲ್ಲಿ. ಆಗ ಭಾರತದಲ್ಲಿದ್ದ ಬ್ರಿಟಿಷರ ಬಳಿ ನಾವು ಸಂಘವನ್ನು ನೋಂದಣಿ ಮಾಡಿಕೊಳ್ಳಬೇಕಿತ್ತಾ? ಸ್ವಾತಂತ್ರ್ಯ ಬಂದ ನಂತರವೂ ನೋಂದಣಿ ಕಡ್ಡಾಯ ಮಾಡಿಲ್ಲ. ನಮ್ಮದು ಸ್ವತಂತ್ರ ಹಾಗೂ ಕಾನೂನಾತ್ಮಕ ಸಂಘವಾಗಿದ್ದು, ಹೀಗಾಗಿಯೇ ನೋಂದಣಿ ಮಾಡಿಸಿಲ್ಲ.
ಹಿಂದೂ ಧರ್ಮ ಕೂಡಾ ನೋಂದಣಿ ಆಗಿಲ್ಲ. RSS ನಿಷೇಧ ಮಾಡುವ ಬಗ್ಗೆಯೂ ಚರ್ಚೆ ನಡೆದಿದ್ದು, ಕೋರ್ಟ್ ಇದನ್ನು ತಿರಸ್ಕರಿಸಿದೆ. ನಮ್ಮದು ಸಂವಿಧಾನಾತ್ಮಕ ಸಂಘವಾಗಿದ್ದು, ಆರ್ಎಸ್ಎಸ್ ಆದಾಯ ತೆರಿಗೆ ಸಹ ಕಟ್ಟುತ್ತಿದೆ ಎಂದು ಹೇಳಿದ್ದಾರೆ. RSS ಸಂಘದಲ್ಲಿ ಮುಸ್ಲಿಂರನ್ನು ಸೇರಿಸಿಕೊಳ್ಳಲು ಅವಕಾಶ ಇದೆಯಾ? ಅಲ್ಪಸಂಖ್ಯಾತ ಮುಸ್ಲಿಂ ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪಿಸುವ ವಿಚಾರ ಇದೆಯಾ? ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ಮೋಹನ್ ಭಾಗವತ್ ಅವ್ರು, ಸಂಘದಲ್ಲಿ ಜಾತಿ, ಲಿಂಗ, ಮುಸ್ಲಿಂ, ಕ್ರೈಸ್ತ, ಬ್ರಾಹ್ಮಣ, ಶೈವ ಎಂಬ ಪಂಥಗಳಿಗೆ ಅವಕಾಶ ಇಲ್ಲ. ಬರೀ ಹಿಂದೂಗಳಿಗೆ ಮಾತ್ರವೇ ಅವಕಾಶ. ಯಾವುದೇ ಧರ್ಮದವರು ಶಾಖೆಗೆ ಬರಬಹುದು ಎಂದಿದ್ದಾರೆ.
































