ತಿರುಮಲ ತಿರುಪತಿ ದೇವಸ್ಥಾನ (TTD) ದಲ್ಲಿ ಲಡ್ಡುಗಾಗಿ ಬಳಕೆ ಮಾಡಲಾಗುವ ತುಪ್ಪ ಕಲಬೆರಕೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ದೆಹಲಿ ಮೂಲದ ರಾಸಾಯನಿಕ ವ್ಯಾಪಾರಿಯನ್ನು ಬಂಧಿಸಿದೆ.
ಅಜಯ್ ಕುಮಾರ್ ಸುಗಂಧ ಬಂಧಿತ ಆರೋಪಿ. ಈತನನ್ನು ಈ ಪ್ರಕರಣದಲ್ಲಿ ಎ-16 ಎಂದು ಹೆಸರಿಸಲಾಗಿದೆ. ಭೋಲೆಬಾಬಾ ಡೈರಿ ನೆಟ್ವರ್ಕ್ಗೆ ಸಂಬಂಧಿಸಿದ ಕಲಬೆರಕೆ ತುಪ್ಪ ತಯಾರಿಸಲು ಬಳಸುವ ರಾಸಾಯನಿಕಗಳನ್ನು ಪೂರೈಸಿದ ಆರೋಪ ಈತನ ಮೇಲಿದೆ. ಸೆಪ್ಟೆಂಬರ್ 2024 ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಹಿಂದಿನ ಆಡಳಿತದಲ್ಲಿ ಟಿಟಿಡಿ ಲಡ್ಡುಗಳನ್ನು ಪ್ರಾಣಿಗಳ ಕೊಬ್ಬಿನೊಂದಿಗೆ ಕಲಬೆರಕೆ ಮಾಡಲಾಗಿತ್ತು ಎಂದು ಆರೋಪ ಮಾಡಿದಾಗ ವಿವಾದ ಭುಗಿಲೆದ್ದಿತ್ತು.
ನಂತರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಸ್ಐಟಿ ರಚಿಸಲಾಯಿತು. ತನಿಖಾಧಿಕಾರಿಗಳ ಪ್ರಕಾರ, ಅಜಯ್ ಕುಮಾರ್ ಸುಮಾರು ಏಳು ವರ್ಷಗಳ ಕಾಲ ಭೋಲೆಬಾಬಾ ಡೈರಿ ನಿರ್ದೇಶಕರಾದ ಪೋಮಿಲ್ ಜೈನ್ ಮತ್ತು ವಿಪಿನ್ ಜೈನ್ ಅವರಿಗೆ ಪಾಮ್ ಎಣ್ಣೆ ತಯಾರಿಸಲು ಬಳಸುವ ರಾಸಾಯನಿಕಗಳಾದ ಮೊನೊಗ್ಲಿಸರೈಡ್ಗಳು, ಅಸಿಟಿಕ್ ಆಮ್ಲ ಮತ್ತು ಎಸ್ಟರ್ಗಳನ್ನು ಪೂರೈಸುತ್ತಿದ್ದ ಎಂದು ತಿಳಿದುಬಂದಿದೆ.
ರಾಸಾಯನಿಕ ತುಪ್ಪ: ದೆಹಲಿಯ ಪ್ರಮುಖ ವಿತರಕರೊಬ್ಬರು ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಂಡ ರಾಸಾಯನಿಕಗಳನ್ನು ಅಜಯ್ ಕುಮಾರ್ ತಮ್ಮ ಕಂಪನಿಯ ಹೆಸರಿನಲ್ಲಿ ಖರೀದಿಸಿ ಡೈರಿಗೆ ಪೂರೈಸಿದ್ದಾರೆ ಎಂದು ಎಸ್ಐಟಿ ಕಂಡುಕೊಂಡಿದೆ. ಈ ರಾಸಾಯನಿಕಗಳನ್ನು ಬಳಸಿ ತಯಾರಿಸಿದ ತುಪ್ಪವನ್ನು ತಿರುಮಲ ತಿರುಪತಿ ದೇವಸ್ಥಾನಗಳಿಗೆ (TTD) ವೈಷ್ಣವಿ ಮತ್ತು ಎಆರ್ ಡೈರಿ ಎಂಬ ಬ್ರಾಂಡ್ ಹೆಸರುಗಳಲ್ಲಿ ಪೂರೈಸಲಾಗುತ್ತಿತ್ತು ಎಂದು ವರದಿಯಾಗಿದೆ.
ಲಡ್ಡು ತಯಾರಿಕೆಯಲ್ಲಿ ಬಳಸುವ ತುಪ್ಪದ ಶೇಕಡಾ 90ಕ್ಕಿಂತ ಹೆಚ್ಚು ಪಾಮ್ ಎಣ್ಣೆಯೊಂದಿಗೆ ಬೆರೆಸಲಾಗಿದೆ ಎಂದು ಎಸ್ಐಟಿ ಪತ್ತೆ ಮಾಡಿದೆ. ಭೋಲೆಬಾಬಾ ಡೈರಿ ನಿರ್ದೇಶಕರೊಂದಿಗೆ ಅಜಯ್ ಕುಮಾರ್ ಅವರ ಸಂಬಂಧ ಹೊಂದಿರುವ ರಾಸಾಯನಿಕ ಪೂರೈಕೆ ಮತ್ತು ಹಣಕಾಸು ವಹಿವಾಟುಗಳ ಪುರಾವೆಗಳನ್ನು ಸಂಗ್ರಹಿಸಿರುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಮೂರು ದಿನಗಳ ಹಿಂದೆ ಈತನನ್ನು ದೆಹಲಿಯಲ್ಲಿ ಬಂಧಿಸಿ, ತಿರುಪತಿಗೆ ಎಸ್ಐಟಿ ಕಚೇರಿಯಲ್ಲಿ ವಿಚಾರಣೆಗಾಗಿ ಕರೆತರಲಾಯಿತು ಮತ್ತು ನಂತರ ನೆಲ್ಲೂರು ಎಸಿಬಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಅಜಯ್ಕುಮಾರ್ನನ್ನು ಈ ತಿಂಗಳ 21 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

































