ಬೆಂಗಳೂರು : ಧರ್ಮಸ್ಥಳ ತಲೆಬುರುಡೆ ಕೇಸ್ ತನಿಖೆ ವಿಚಾರವಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಧರ್ಮಸ್ಥಳ ಠಾಣೆಯ ಎಫ್ಐಆರ್ 39/2025 ತನಿಖೆಗೆ ಅ.30ರಂದು ನೀಡಿದ್ದ ತಡೆಯಾಜ್ಞೆಯನ್ನ ತೆರವುಗೊಳಿಸಿದ್ದು, ತನಿಖೆಗೆ ಅನುಮತಿ ನೀಡಿದೆ.
ಹೀಗಾಗಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಹಾಗೂ ವಿಠ್ಠಲಗೌಡ ಎಸ್ಐಟಿ ತನಿಖೆಯನ್ನ ಮತ್ತೆ ಎದುರಿಸಬೇಕಿದೆ.
ಪ್ರಕರಣ ಸಂಬಂಧ ಎಸ್ಐಟಿ ಪರ ವಾದಿಸಿದ್ದ ವಿಶೇಷ ಅಭಿಯೋಜಕ ಬಿ.ಎನ್.ಜಗದೀಶ್, ಮ್ಯಾಜಿಸ್ಟ್ರೇಟ್ ಅನುಮತಿ ಪಡೆದ ನಂತರವೇ ತನಿಖೆ ನಡೆಸಲಾಗುತ್ತಿದೆ. ಎಸ್ಐಟಿ ತನಿಖೆಯನ್ನು ಅರ್ಜಿದಾರರೇ ಹೊಗಳಿದ್ದಾರೆಂದು ನ್ಯಾಯಾಲಕ್ಕೆ ತಿಳಿಸಿದ್ದರು. ಈ ಹಿನ್ನಲೆ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿ, ಆರೋಪಿಗಳಿಗೆ ಕಿರುಕುಳ ನೀಡದಂತೆ ಮಧ್ಯಂತರ ಆದೇಶ ವಿಸ್ತರಣೆ ಮಾಡಿ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ಹೈಕೋರ್ಟ್ ಪೀಠದಿಂದ ಆದೇಶ ಮಾಡಲಾಗಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ 39/2025 ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಹಾಗೂ ವಿಠ್ಠಲಗೌಡ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.































