ನವದೆಹಲಿ : ದೆಹಲಿ ಸ್ಫೋಟ ಘೋರ ಭಯೋತ್ಪಾದಕ ಕೃತ್ಯ ಎಂದು ಭದ್ರತೆಗೆ ಸಂಬಂಧಿಸಿದ ಕೇಂದ್ರ ಉನ್ನತ ಮಟ್ಟದ ಸಂಪುಟ ಸಮಿತಿಯು ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಮುಖ ಭದ್ರತಾ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಧಾನ ಮಂತ್ರಿಯವರ ನಿವಾಸದಲ್ಲಿ ಸಭೆ ಸೇರಿದ ಕೇಂದ್ರ ಸಚಿವ ಸಂಪುಟವು, ದಾಳಿಯನ್ನು ಖಂಡಿಸುವ ಔಪಚಾರಿಕ ನಿರ್ಣಯವನ್ನು ಅಂಗೀಕರಿಸುವ ಮೊದಲು ಸ್ಫೋಟದಲ್ಲಿ ಮೃತಪಟ್ಟ ಅಮಾಯಕರಿಗೆ ಗೌರವ ಸಲ್ಲಿಸುವ ಸಲುವಾಗಿ ಎರಡು ನಿಮಿಷಗಳ ಮೌನ ಆಚರಿಸಿತು.
ರಾಷ್ಟ್ರವಿರೋಧಿ ಶಕ್ತಿಗಳು ನಡೆಸಿದ ಒಂದು ಹೇಡಿತನದ ಕೃತ್ಯ ಎಂದು ಸರ್ಕಾರ ತಿಳಿಸಿದೆ. ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ಬಗ್ಗೆ ಯಾವುದೇ ಸಹಿಷ್ಣುತೆ ಇಲ್ಲ ಎಂಬ ನೀತಿಗೆ ಭಾರತದ ಅಚಲ ಬದ್ಧತೆಯನ್ನು ಪುನರುಚ್ಚರಿಸಿದೆ.
ಸ್ಫೋಟದಲ್ಲಿ ಮುಗ್ಧ ಜೀವಗಳು ಪ್ರಾಣ ಕಳೆದುಕೊಂಡಿದ್ದು ತೀವ್ರ ದುಃಖ ತರಿಸಿದೆ. ಮೃತರ ಕುಟುಂಬಗಳಿಗೆ ಸಂತಾಪಗಳು. ಗಾಯಾಳುಗಳಿಗೆ ವೈದ್ಯಕೀಯ, ತುರ್ತು ಸಹಾಯ ಕಲ್ಪಿಸಿದ ವೈದ್ಯಕೀಯ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನವೆಂಬರ್ 10 ರ ಸಂಜೆ, ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಬಿಳಿ ಬಣ್ಣದ ಹುಂಡೈ i20 ಕಾರು ಸ್ಫೋಟವಾಗಿ 12 ಮಂದಿ ಮೃತಪಟ್ಟಿದ್ದಾರೆ . ಈ ಸ್ಫೋಟವು ಹಲವಾರು ವಾಹನಗಳಿಗೆ ಹಾನಿಯನ್ನುಂಟು ಮಾಡಿದೆ. ಹತ್ತಿರದ ಕಟ್ಟಡಗಳ ಗಾಜುಗಳನ್ನು ಪುಡಿಪುಡಿ ಮಾಡುವಷ್ಟು ಸ್ಫೋಟ ಪ್ರಬಲವಾಗಿತ್ತು.































