ನವದೆಹಲಿ : ದೆಹಲಿಯ ಕೆಂಪು ಕೋಟೆ ಬಳಿ ನ.10ರಂದು ಕಾರ್ ಬಾಂಬ್ ಸ್ಫೋಟ ಮಾಡಿದ್ದು ಡಾ. ಉಮರ್ ಎನ್ನುವುದು ಅಧಿಕೃತವಾಗಿ ದೃಢಡಪಟ್ಟಿದೆ.
ಐ20 ಕಾರನ್ನು ಚಲಾಯಿಸಿದ ವ್ಯಕ್ತಿ ಉಮರ್ ಎಂದು ತನಿಖಾಧಿಕಾರಿಗಳು ಮೊದಲೇ ಶಂಕಿಸಿದ್ದರು. ಹೀಗಿದ್ದರೂ ಮುಂದೆ ಚಾರ್ಜ್ಶೀಟ್ ಸಲ್ಲಿಕೆ ಮಾಡುವಾಗ ಮೃತ ವ್ಯಕ್ತಿ ಉಮರ್ ಎನ್ನುವುದಕ್ಕೆ ವೈಜ್ಞಾನಿಕ ದಾಖಲೆಯ ಅಗತ್ಯ ಇತ್ತು. ಹೀಗಾಗಿ ಪುಲ್ವಾಮಾದಲ್ಲಿರುವ ಉಮರ್ ತಾಯಿಯ ಡಿಎನ್ಎ ಮಾದರಿಯನ್ನೂ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿತ್ತು.
ಸ್ಫೋಟದ ಬಳಿಕ ಉಮರ್ ಕಾಲು ಸ್ಟೀರಿಂಗ್ ವೀಲ್ ಮತ್ತು ಆಕ್ಸಿಲರೇಟರ್ ನಡುವೆ ಸಿಲುಕಿಕೊಂಡಿತ್ತು. ಡಿಎನ್ಎ ಮಾದರಿ ಉಮರ್ ತಾಯಿಯ ಮಾದರಿಯೊಂದಿಗೆ ಹೊಂದಿಕೆಯಾಗಿದೆ ಎಂದು ದೆಹಲಿ ಪೊಲೀಸರ ಮೂಲಗಳಿಂದ ತಿಳಿದುಬಂದಿದೆ.
ಇನ್ನು ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖೆ ಚುರುಕುಗೊಳಿಸಿದ್ದು, ಬುಧವಾರ ಅಧಿಕಾರಿಗಳು ಸ್ಫೋಟಗೊಂಡಿದ್ದ ಕಾರು ಹೊರತಾಗಿ ದೆಹಲಿಗೆ ಎಂಟ್ರಿಯಾಗಿದ್ದ ಇನ್ನೊಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಸ್ಫೋಟಕ್ಕೂ ಮುನ್ನ ದೆಹಲಿಗೆ ಉಗ್ರರ ಎರಡು ಕಾರುಗಳು ಎಂಟ್ರಿಯಾಗಿದ್ದವು ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಎರಡು ಕಾರುಗಳ ಪೈಕಿ ಕೆಂಪುಕೋಟೆ ಬಳಿ ಒಂದು ಕಾರು ಸ್ಫೋಟಗೊಂಡಿತ್ತು. ಇದನ್ನರಿತ ಅಧಿಕಾರಿಗಳು ಇನ್ನೊಂದು ಕಾರಿನ ಪತ್ತೆ ಹಚ್ಚುತ್ತಿದ್ದರು. ದೆಹಲಿಯಲ್ಲಿ ಚೆಕ್ಪೋಸ್ಟ್ ಮೂಲಕ ಕಾರಿನ ಹುಡುಕಾಟ ನಡೆಸಿದ್ದರು. ಬಳಿಕ ಫರೀದಾಬಾದ್ ಪೊಲೀಸರು ಕೆಂಪು ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ಪತ್ತೆ ಮಾಡಿದ್ದರು.
ಪತ್ತೆಯಾದ ಕಾರು ಕೂಡ ದೆಹಲಿ ಸ್ಫೋಟದ ಪ್ರಮುಖ ಶಂಕಿತ ಡಾ.ಉಮರ್ ಉನ್ ನಬಿಗೆ ಸೇರಿದ್ದು, ನಕಲಿ ದಾಖಲೆಗಳನ್ನು ನೀಡಿ, ಕಾರು ಖರೀದಿಸಿದ್ದಾನೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ದಾಳಿಯಾದ ಬಳಿಕ ವಾಹನದ ಮಾಲೀಕತ್ವದ ಬಗ್ಗೆ ಮಾಹಿತಿ ಸಿಗಬಾರದು ಎಂಬ ಉದ್ದೇಶದೊಂದಿಗೆ ನಕಲಿ ದಾಖಲೆಗಳನ್ನು ನೀಡಿದ್ದ. ಪತ್ತೆಯಾದ ಕಾರು ಡಾ.ಉಮರ್ ಉನ್ ನಬಿ ಹೆಸರಿನಲ್ಲಿ ನೋಂದಣಿಯಾಗಿದ್ದು, ಈಶಾನ್ಯ ದೆಹಲಿಯ ನ್ಯೂ ಸೀಲಾಂಪುರ್ ಪ್ರದೇಶದ ವಿಳಾಸವೊಂದನ್ನು ಹೊಂದಿದೆ ಎನ್ನಲಾಗಿದೆ.































