ಚಿತ್ರದುರ್ಗ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ನೀಡಲು ಮತ್ತು ಪ್ರಶಸ್ತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಗದು ಪುರಸ್ಕಾರ ಪ್ರೋತ್ಸಾಹಧನ ಯೋಜನೆಗೆ 2023 ಮತ್ತು 2024ನೇ ಸಾಲಿನಲ್ಲಿ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಅಥವಾ ಪದಕ ವಿಜೇತರಾದ ರಾಜ್ಯದ ಕ್ರೀಡಾಪಟುಗಳು, ಶೈಕ್ಷಣಿಕ ಶುಲ್ಕ ಮರುಪಾವತಿ ಪ್ರೋತ್ಸಾಹಧನ ಯೋಜನೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಸ್ನಾತಕೋತ್ತರ ವೃತ್ತಿಪರ ಕೋರ್ಸ್ ವಿದ್ಯಾಭ್ಯಾಸದಲ್ಲಿ ನಿರತರಾದ ಕ್ರೀಡಾಪಟುಗಳಿಗೆ, ಕ್ರೀಡಾ ವಿದ್ಯಾರ್ಥಿವೇತನ ಪ್ರೋತ್ಸಾಹಧನ ಯೋಜನೆಗೆ 2024 ಮತ್ತು 25ನೇ ಸಾಲಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಹಾಗೂ ರಾಷ್ಟ್ರಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ ಅಥವಾ ಪದಕ ವಿಜೇತರಾದ 6ನೇ ತರಗತಿಯಿಂದ 10ನೇ ತರಗತಿವರೆಗಿನ ಕ್ರೀಡಾಪಟುಗಳಿಗೆ ಕ್ರೀಡಾವಿದ್ಯಾರ್ಥಿ ವೇತನ ನೀಡಲಾಗುವುದು.
ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ತೋರಿರುವ ರಾಜ್ಯದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ, ಸಾಧಕ ಕ್ರೀಡಾಪಟುಗಳನ್ನು ರೂಪಿಸಿದ ರಾಜ್ಯದ ತರಬೇತುದಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ, ಗ್ರಾಮೀಣ ಮತ್ತು ಪಾರಂಪರಿಕ ಕ್ರೀಡೆಗಳ ಸಾಧಕ ಕ್ರೀಡಾಪಟುಗಳಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ, ರಾಜ್ಯದ ಕ್ರೀಡಾ ಅಭಿವೃದ್ಧಿಗೆ ಕೊಡುಗೆ ನೀಡಿದ ಕ್ರೀಡಾ ಪೋಷಕ ಸಂಸ್ಥೆಗಳಿಗೆ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗಳು-2024ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿ ವೇತನಕ್ಕಾಗಿ ಅರ್ಹ ಕ್ರೀಡಾಪಟುಗಳು https://sevasindhu.karnataka.gov.in ನಲ್ಲಿ ಆನ್ಲೈನ್ ಮೂಲಕ ಡಿಸೆಂಬರ್ 03ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ































