ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ತಡರಾತ್ರಿ ಭಾರಿ ಸ್ಫೋಟ ಸಂಭವಿಸಿದೆ. ಹರಿಯಾಣದ ಫರಿದಾಬಾದ್ನಲ್ಲಿ ವಶಪಡಿಸಿಕೊಂಡಿದ್ದ ಸ್ಫೋಟಕ ವಸ್ತು ಸ್ಫೋಟಿಸಿ 7 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ ಮತ್ತು 30 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದ ತೀವ್ರತೆಗೆ ಪೊಲೀಸ್ ಠಾಣೆಯಿಂದ ಭಾರಿ ಪ್ರಮಾಣದ ಹೊಗೆ ಮತ್ತು ಜ್ವಾಲೆಗಳು ಹೊರಬರುತ್ತಿರುವುದು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಲ್ಲಿ ಕಾಣಿಸಿವೆ. ಗಾಯಗೊಂಡ ಪೊಲೀಸರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು.
ನವದೆಹಲಿಯ ಕೆಂಪುಕೋಟೆ ಬಳಿ ಕಾರ್ ಬಾಂಬ್ ಸ್ಫೋಟ ಸಂಭವಿಸಿದ ಕೆಲವೇ ದಿನಗಳಲ್ಲಿ ಇದೀಗ ಶ್ರೀನಗರದಲ್ಲೂ ಸ್ಫೋಟ ಸಂಭವಿಸಿದೆ. ದೆಹಲಿ ಸ್ಫೋಟದಲ್ಲಿ ಒಟ್ಟು 13 ಜನ ಸಾವಿಗೀಡಾಗಿದ್ದರು.
ಬಂಧಿತ ಉಗ್ರ, ವೈದ್ಯ ಮುಜಮ್ಮಿಲ್ ಗನೈ ಬಾಡಿಗೆ ಮನೆಯಿಂದ ವಶಪಡಿಸಿಕೊಂಡ 360 ಕಿಲೋಗ್ರಾಂಗಳಷ್ಟು ಸ್ಫೋಟಕಗಳ ಪೈಕಿ ಒಂದಷ್ಟನ್ನು ಈಗಿನ ತನಿಖೆಯ ಅಂಗವಾಗಿ ಮಾದರಿಯಾಗಿ ಸಂಗ್ರಹಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವುಗಳಿಂದಾಗಿಯೇ ಸ್ಫೋಟ ಸಂಭವಿಸಿದೆ. ಸದ್ಯ ಘಟನಾ ಸ್ಥಳದಿಂದ ಆರು ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು ಮೃತರನ್ನು ಗುರುತು ಪತ್ತೆ ಕಾರ್ಯ ಇನ್ನಷ್ಟೇ ಆಗಬೇಕಿದೆ. ಶವಗಳನ್ನು ಶ್ರೀನಗರದ ಪೊಲೀಸ್ ನಿಯಂತ್ರಣ ಕೊಠಡಿಗೆ ಕೊಂಡೊಯ್ಯಲಾಗಿದೆ.
ಉಗ್ರನ ಮನೆಯಿಂದ ವಶಪಡಿಸಿಕೊಂಡಿದ್ದ ಕೆಲವು ಸ್ಫೋಟಕಗಳನ್ನು ಪೊಲೀಸ್ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸಂಗ್ರಹಿಸಲಾಗಿತ್ತು. 360 ಕಿಲೋಗ್ರಾಂಗಳಷ್ಟು ಸ್ಫೋಟಕಗಳಲ್ಲಿ ಹೆಚ್ಚಿನದ್ದನ್ನು ಭಯೋತ್ಪಾದಕ ಘಟಕದ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಅಕ್ಟೋಬರ್ ಮಧ್ಯದಲ್ಲಿ ನೌಗಾಮ್ನ ಬನ್ಪೋರಾದಲ್ಲಿ ಗೋಡೆಗಳ ಮೇಲೆ ಬೆದರಿಕೆ ಪೋಸ್ಟರ್ಗಳನ್ನು ಪೊಲೀಸರು ಮತ್ತು ಭದ್ರತಾ ಪಡೆಗಳು ಪತ್ತೆ ಮಾಡಿದ ನಂತರ ಇಡೀ ಸಂಚು ಬಯಲಾಗಿತ್ತು. ಈ ಘಟನೆಯನ್ನು ದೇಶದ ಭದ್ರತೆಗೆ ಗಂಭೀರ ಬೆದರಿಕೆ ಎಂದು ಪರಿಗಣಿಸಿ, ಶ್ರೀನಗರ ಪೊಲೀಸರು ಅಕ್ಟೋಬರ್ 19ರಂದು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ತಂಡವನ್ನು ರಚಿಸಿದ್ದರು. ತನಿಖೆ ನಡೆದು ಉಗ್ರರ ಬೃಹತ್ ಜಾಲವನ್ನು ಬೇಧಿಸಲಾಗಿತ್ತು. ಅದೇ ಸಂದರ್ಭದಲ್ಲೇ ದೆಹಲಿ ಸ್ಫೋಟವೂ ಸಂಭವಿಸಿತ್ತು.
ಈ ನಡುವೆ ಇದು ಉಗ್ರರ ದಾಳಿಯೂ ಆಗಿರಬಹುದು ಎಂಬ ಅನುಮಾನ ಇದೆ. ಗಾಯಾಳುಗಳಲ್ಲಿ ಹೆಚ್ಚಿನವರು ಪೊಲೀಸ್ ಮತ್ತು ವಿಧಿವಿಜ್ಞಾನ ಅಧಿಕಾರಿಗಳು ಎಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಭದ್ರತಾ ಪಡೆಗಳು ಧಾವಿಸಿದ್ದು, ತನಿಖೆ ನಡೆಯುತ್ತಿದೆ. ಶ್ರೀನಗರ ಉಪ ಆಯುಕ್ತ ಅಕ್ಷಯ್ ಲ್ಯಾಬ್ರೂ ಜಮ್ಮು ಮತ್ತು ಕಾಶ್ಮೀರದ ನೌಗಾಮ್ ಪೊಲೀಸ್ ಠಾಣೆ ಬಳಿ ನಡೆದ ಸ್ಫೋಟದ ಸಂತ್ರಸ್ತರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
































