ಗಾಂಧೀನಗರ :ಸೀರೆ ವಿಚಾರಕ್ಕೆ ಜಗಳವಾಗಿ ವಧುವನ್ನು ವರ ಹತ್ಯೆ ಮಾಡಿರುವ ಘಟನೆ ಗುಜರಾತ್ನ ಭಾವನಗರದಲ್ಲಿ ನಡೆದಿದೆ. ಜೋಡಿಯ ಮದುವೆಗೆ ಕೇವಲ ಒಂದು ಗಂಟೆ ಇದ್ದಾಗಲೇ ಕೊಲೆಯಾಗಿದೆ.
ಪ್ರಭುದಾಸ್ ಸರೋವರದ ಟೆಕ್ರಿ ಚೌಕ್ ಬಳಿ ವಧು-ವರರ ನಡುವೆ ಸೀರೆ ಮತ್ತು ಹಣದ ವಿಚಾರಕ್ಕೆ ಜಗಳವಾಗಿತ್ತು. ಸೋನಿ ಹಿಮ್ಮತ್ ರಾಥೋಡ್ ಹತ್ಯೆಯಾದ ಮಹಿಳೆ. ಸಜನ್ ಬರಯ್ಯ ಹತ್ಯೆ ಮಾಡಿದ ವರ.
ಇವರಿಬ್ಬರೂ ಕಳೆದ ಒಂದೂವರೆ ವರ್ಷದಿಂದ ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ದರು. ನಂತರ ಇಬ್ಬರು ಮದುವೆಯಾಗಲು ನಿರ್ಧರಿಸಿದರು. ಅದರಂತೆ ನಿಶ್ಚಿತಾರ್ಥ ಕೂಡ ನಡೆದಿತ್ತು. ಶನಿವಾರ ಇಬ್ಬರೂ ಹಸೆಮಣೆ ಏರಬೇಕಿತ್ತು.
ಆದರೆ, ಮದುವೆಗೆ ಕೇವಲ ಒಂದು ಗಂಟೆ ಮೊದಲು ಸೀರೆ ಮತ್ತು ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಪದ ಭರದಲ್ಲಿ ಸಜನ್, ಸೋನಿಗೆ ಕಬ್ಬಿಣದ ಪೈಪ್ನಿಂದ ಹೊಡೆದಿದ್ದಾನೆ. ಬಳಿಕ ಆಕೆಯ ತಲೆಯನ್ನು ಗೋಡೆಗೆ ಡಿಕ್ಕಿ ಹೊಡೆಸಿದ್ದಾನೆ.
ಆರೋಪಿಗಳು ಮನೆಯನ್ನು ಧ್ವಂಸ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಹಿತಿ ಪಡೆದ ಪೊಲೀಸ್ ತಂಡವು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಧಾವಿಸಿದೆ. ಮದುವೆಗೂ ಮುನ್ನ ಆರೋಪಿ ನೆರೆಹೊರೆಯವರೊಂದಿಗೆ ಜಗಳ ಮಾಡಿಕೊಂಡಿದ್ದ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈಗ ಕೊಲೆ ಪ್ರಕರಣದಲ್ಲೂ ಆತನ ವಿರುದ್ಧ ಎಫ್ಐಆರ್ ದಾಖಲಾಗಿದೆ.

































