ಬೆಂಗಳೂರು: ಕರಾವಳಿ ಕರ್ನಾಟಕದಲ್ಲಿ ಗಂಡು ಕಲೆ ಯಕ್ಷಗಾನಕ್ಕೆ ವಿಶೇಷವಾದ ಸ್ಥಾನವಿದೆ. ಅಲ್ಲದೇ ಯಕ್ಷಗಾನ ಕಲಾವಿದರನ್ನು ಅತ್ಯಂತ ಗೌರವದಿಂದಲೂ ಕಾಣಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಕೆಲವು ಕಲಾವಿದರು ರಾಜಕೀಯ ಪಕ್ಷಗಳು, ನಾಯಕರ ಪರವಾಗಿ ಪ್ರಚಾರ ಮಾಡುವುದು ಇದೆ. ಆದರೆ ಇದೀಗ ಕರ್ನಾಟಕದ ಯಕ್ಷಗಾನ ಕಲಾವಿದರಿಗೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಅವರು ನೀಡಿರುವ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿದೆ.
ಯಕ್ಷಗಾನ ಕಲಾವಿದರಲ್ಲಿ ಅನೇಕರು ಸಲಿಂಗಿಗಳು. ಅಲ್ಲಿ ಅಂಥ ಅನಿವಾರ್ಯತೆ ನಿರ್ಮಾಣವಾಗಿತ್ತು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹಲವರು ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ಪರ – ವಿರೋಧ ನಿಲುವುಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇಷ್ಟಕ್ಕೂ ಸಲಿಂಗ ಕಾಮ ಹಾಗೂ ಯಕ್ಷಗಾನದ ವಿಚಾರವಾಗಿ ಪುರುಷೋತ್ತಮ ಬಿಳಿಮಲೆ ಅವರು ಹೇಳಿದ್ದು ಏನು ಎನ್ನುವ ಬಗ್ಗೆ ಪ್ರಜಾವಾಣಿ ವರದಿ ಮಾಡಿದೆ. ಇದರ ವಿವರ ಇಲ್ಲಿದೆ.
ಮೈಸೂರಿನ ಮಾನಸಗಂಗೋತ್ರಿಯ ಪ್ರಸಾರಾಂಗದಲ್ಲಿ ಮಂಗಳವಾರ ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು ಹಾಗೂ ನಾವು ಕೂಗುವ ಕೂಗು ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದ್ದು. ಯಕ್ಷಗಾನದ ಕಲಾವಿದರಿಗೆ ಸಂಬಂಧಿಸಿದ ಗಂಭೀರ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಸತ್ಯವನ್ನು ಹೇಳಲು ಹಿಂಜರಿಯಬಾರದು.
ಕಲಾವಿದರು ಮೇಳಕ್ಕೆಂದು ಆರೆಂಟು ತಿಂಗಳು ತಿರುಗಾಟದಲ್ಲೇ ಇರುತ್ತಿದ್ದರಿಂದ ಅವರಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಅಲ್ಲಿನ ಸ್ತ್ರೀ ವೇಷಧಾರಿಗಳೂ ಒತ್ತಡದಲ್ಲಿರುತ್ತಿದ್ದರು. ಹೀಗಾಗಿ ಅವರಿಗೆ ಇತರರಿಗೆ ಮೋಹವೇ ಇದ್ದಿದ್ದು ಉಂಟು ಎಂದಿದ್ದಾರೆ.
ಎಷ್ಟೋ ಬಾರಿ ಸ್ತ್ರೀ ವೇಷದ ಕಲಾವಿದ ಏನಾದರೂ ಸಲಿಂಗಕಾಮ ನಿರಾಕರಣೆ ಮಾಡಿದ್ದರೆ, ಭಾಗವತರು ಮರು ದಿವಸ ಅವರಿಗೆ ಪದ್ಯವನ್ನೇ ಕೊಡುತ್ತಿರಲಿಲ್ಲ. ರಂಗಭೂಮಿಯ ಮೇಲೆ ಅವನ ವಿರುದ್ಧ ಸೇಡು ತೀರಿಸಿಕೊಳ್ಳುವುದಿತ್ತು. ಮೇಳದಲ್ಲಿ ಅವಕಾಶ ಇಲ್ಲದೆ ಹೋದರೆ ಬದುಕೇ ಇಲ್ಲವೆಂಬ ಒತ್ತಡಕ್ಕೆ ಕಲಾವಿದರು ಒಳಗಾಗಿರುವ ಉದಾಹರಣೆಗಳು ಸಹ ಇವೆ ಎಂದಿದ್ದಾರೆ.
ಅಂದಿನ ಕಾಲದಲ್ಲಿ ಕಲಾವಿದರು ಮೇಳಕ್ಕೆಂದು ಹೋಗಿ ವಾಪಸಾಗುವ ಸಂದರ್ಭದಲ್ಲಿಯೂ ಹಲವರಿಗೆ ಮನೆಯೇ ಇರುತ್ತಿರಲಿಲ್ಲ. ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಉದಾಹರಣೆಗಳು ಸಹ ಇವೆ. ಈ ರೀತಿಯ ದುರಂತ ಕಾವ್ಯಗಳು ಅವರ ಬದುಕಿನಲ್ಲಿವೆ. ಅವನ್ನು ಗ್ರಹಿಸುವ ಶಕ್ತಿ ಸಮಾಜಕ್ಕೆ ಇಲ್ಲ. ಹಾಡಿನ ಚಪ್ಪಾಳೆಯಷ್ಟೇ ಮುಖ್ಯವಾಗಲೇ ಬಾರದು. ಯಕ್ಷಗಾನ ಕಲಾವಿದರ ಬದುಕಿನ ಬಿಕ್ಕಟ್ಟಿನ ಕಾವ್ಯಕ್ಕೆ ಅಕ್ಷರಸ್ಥರು, ವಿದ್ವಾಂಸರು ದನಿಯಾಗಬೇಕು ಎಂದು ಅವರು ಹೇಳಿದ್ದಾರೆ.
































