ಬೆಂಗಳೂರಿನ ಡೇರಿ ಸರ್ಕಲ್ ಬಳಿ ಬುಧವಾರ ಮಧ್ಯಾಹ್ನ ಹಾಡಹಗಲೇ 7.11 ಕೋಟಿ ರೂ. ದರೋಡೆ ಮಾಡಿರುವ ಘಟನೆ ನಡೆದಿದೆ. ಎಟಿಎಂಗಳಿಗೆ ಹಣ ಹಾಕಲು ಹೋಗುತ್ತಿದ್ದ ಸಿಎಂಎಸ್ ವಾಹನವನ್ನು ಹೈಜಾಕ್ ಮಾಡಿ ಬಳಿಕ ಡೇರಿ ಸರ್ಕಲ್ ಫ್ಲೈಓವರ್ ಮೇಲೆ ನಿಲ್ಲಿಸಿ ಬರೋಬ್ಬರಿ 7.11 ಕೋಟಿ ರೂ. ದೋಚಿಕೊಂಡು ಹೋಗಿದ್ದಾರೆ.
ಇನ್ನು ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು,ಸಿಎಂಎಸ್ ವಾಹನ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸಿಎಂಎಸ್ ವಾಹನ ಸಿಕ್ಕಿದ್ದ ಫ್ಲೈ ಓವರ್ ಮೂರು ಪೊಲೀಸ್ ಠಾಣೆಗಳಿಗೆ ಬಾರ್ಡರ್. ನಿಮಾನ್ಸ್ನಿಂದ ಮೇಲ್ಭಾಗಕ್ಕೆ ಬಂದರೆ ಆಡುಗೋಡಿ ಪೊಲೀಸ್ ಸ್ಟೇಷನ್ ಸರಹದ್ದು, ವಾಹನದ ಎಡಬದಿಯಲ್ಲಿ ಸುದ್ಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿ ಮತ್ತು ಕೃತ್ಯ ನಡೆದಿರುವುದು ಸಿದ್ದಾಪುರ ಠಾಣೆ ಲಿಮಿಟ್ಸ್ನಲ್ಲಿ. ಆ ಪೈಕಿ ಸಿದ್ದಾಪುರ ಠಾಣೆ ದಕ್ಷಿಣ ವಿಭಾಗಕ್ಕೆ ಸೇರಿದರೆ ವಾಹನ ಸಿಕ್ಕಿದ್ದು ಇಂಚಿನ ವ್ಯತ್ಯಾಸದಲ್ಲಿ ಸುದ್ಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ.
ಈ ಠಾಣೆ ಸೌತ್ ಈಸ್ಟ್ ವಿಭಾಗಕ್ಕೆ ಸೇರಿದ್ದು. ಹೀಗಾಗಿ ವಾಹನ ಸಿಕ್ಕ ಬಳಿಕ ಮೊದಲು ಯಾವ ಠಾಣಾ ವ್ಯಾಪ್ತಿಗೆ ಘಟನೆ ಬರಲಿದೆ ಎಂಬ ಗೊಂದಲ ಉಂಟಾಗಿದೆ. ಪೊಲೀಸರು ಸಾಮಾನ್ಯವಾಗಿ ತಮ್ಮ ಠಾಣೆ ಸಹರದ್ದಿನ ಆಧಾರದ ಮೇಲೆ ಕೆಲಸ ಮಾಡಲಿರುವ ಕಾರಣ, ರಾಬರ್ಸ್ ಪ್ಲ್ಯಾನ್ನಲ್ಲಿ ಈ ಅಂಶವೂ ಇತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ. ಹೀಗಾಗಿ, ಅನೇಕ ರಾಬರಿ ಸೀರೀಸ್ ಗಳಲ್ಲಿ ಇರುವಂತೆ ಪೊಲೀಸರನ್ನೇ ಗೊಂದಲಕ್ಕೆ ದೂಡಿ ಗ್ರೇಟ್ ಎಸ್ಕೇಪ್ ಆಗುವ ಪ್ಲ್ಯಾನ್ ಆರೋಪಿಗಳದ್ದಾಗಿತ್ತಾ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
































