ನೈಜೀರಿಯಾದ ನೈಜರ್ ರಾಜ್ಯದ ಅಲ್ವಾರದ ಪಾಪಿರಿ ಸಮುದಾಯದಲ್ಲಿರುವ ಸೇಂಟ್ ಮೇರಿ ಕ್ಯಾಥೋಲಿಕ್ ಶಾಲೆಗೆ ಶುಕ್ರವಾರ ಮುಂಜಾನೆ ನುಗ್ಗಿದ ಬಂದೂಕುಧಾರಿಗಳು ಕನಿಷ್ಠ 215 ವಿದ್ಯಾರ್ಥಿಗಳು ಮತ್ತು 12 ಶಿಕ್ಷಕರನ್ನು ಅಪಹರಿಸಿದ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ನೈಜೀರಿಯಾ ಕ್ರಿಶ್ಚಿಯನ್ ಅಸೋಸಿಯೇಷನ್ (CAN) ಮಾಹಿತಿ ನೀಡಿದ್ದು, ಇದು ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿ ದೊಡ್ಡ ಸಾಮೂಹಿಕ ಶಾಲಾ ಅಪಹರಣಗಳಲ್ಲೊಂದಾಗಿದೆ.
ಘಟನೆ ವೇಳೆ ಕೆಲ ವಿದ್ಯಾರ್ಥಿಗಳು ಅಪಹರಣಕಾರರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಅನೇಕ ಮಕ್ಕಳ ಪತ್ತೆಯ ಮಾಹಿತಿ ಇನ್ನೂ ದೊರಕಿಲ್ಲ. ಕುಟುಂಬಗಳು ಶಾಲೆಯ ಬಳಿ ಜಮಾಯಿಸಿ ಆತಂಕದಿಂದ ಕಣ್ಣೀರಿಡುತ್ತಿವೆ. ಗುಪ್ತಚರ ಎಚ್ಚರಿಕೆಗಳಿದ್ದರೂ ಶಾಲೆಯನ್ನು ಪುನರಾರಂಭಿಸಿದ್ದು ದೊಡ್ಡ ನಿರ್ಲಕ್ಷ್ಯ ಎಂದು ನೈಜರ್ ರಾಜ್ಯ ಸರ್ಕಾರ ಸಂಸ್ಥೆಯನ್ನು ಟೀಕಿಸಿದೆ. ಭದ್ರತಾ ಸಿಬ್ಬಂದಿಯ ಮೇಲೂ ದಾಳಿಕೋರರು ಗುಂಡು ಹಾರಿಸಿದ ಮಾಹಿತಿ ಲಭ್ಯವಾಗಿದೆ.
ಈ ಘಟನೆ ಉತ್ತರ ನೈಜೀರಿಯಾದಲ್ಲಿ ಹೆಚ್ಚುತ್ತಿರುವ ಅಪಹರಣಗಳ ಸರಣಿಗೆ ಮತ್ತೊಂದು ಉದಾಹರಣೆ. ವಾರದ ಆರಂಭದಲ್ಲೇ ಕೆಬ್ಬಿ ರಾಜ್ಯದಲ್ಲಿ 25 ವಿದ್ಯಾರ್ಥಿನಿಯರನ್ನು ಮತ್ತು ಕ್ವಾರಾದಲ್ಲಿ 38 ಜನರನ್ನು ಅಪಹರಿಸಿದ ಘಟನೆಗಳು ಸಂಭವಿಸಿವೆ.































