ಕಾಸರಗೋಡಿನಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ಭಾಷಾ ದೌರ್ಜನ್ಯದ ವಿರುದ್ಧ ಡಿಸೆಂಬರ್ ಮೂರನೇ ವಾರದಲ್ಲಿ ಕೇರಳ ಕರ್ನಾಟಕ ಗಡಿ ಬಂದ್ ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಕಾಸರಗೋಡನ್ನು ಉದ್ದೇಶಪೂರ್ವಕವಾಗಿ ಮಲೆಯಾಳಿ ಮಾಡಲಾಗುತ್ತಿದೆ. ಭಾಷಾ ದೌರ್ಜನ್ಯದ ವಿರುದ್ಧ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ. ಡಿಸೆಂಬರ್ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ ಮಾಡಲಾಗುವುದು. ಬಳಿಕ ಡಿಸೆಂಬರ್ ಮೂರನೇ ವಾರದಲ್ಲಿ ಕೇರಳ ಕರ್ನಾಟಕ ಗಡಿ ಬಂದ್ ಗೆ ಕರೆ ನೀಡಲಾಗುವುದು ಎಂದು ತಿಳಿಸಿದರು.
ಮಹಾಜನ್ ವರದಿ ಪ್ರಕಾರ ಕಾಸರಗೋಡು ಕರ್ನಾಟಕಕ್ಕೆ ಸೇರಿದೆ. ನಮಗೆ ಅನುಕೂಲವಿದ್ದರೂ ಸುಪ್ರೀಂಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಗಡಿನಾಡಿನ ಬಗ್ಗೆ ವಿಧಾನಸಭೆ, ಪಾರ್ಲಿಮೆಂಟ್ ನಲ್ಲಿ ಯಾರೂ ಮಾತನಾಡುತ್ತಿಲ್ಲ. ಕರ್ನಾಟಕದಲ್ಲಿಯೂ ಪರಭಾಷಿಗರ ದಾಳಿ ಬಹಳಷ್ಟು ಆಗಿದೆ ಎಂದು ವಾಟಾಳ್ ನಾಗರಾಜ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಿವರಾಮ ಕಾಸರಗೋಡು ಮತ್ತಿತರರು ಇದ್ದರು.
































