ಲಕ್ನೋ : ಇಂದು ಅಯೋಧ್ಯೆ ನಗರ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಸಂಪೂರ್ಣ ಭಾರತ, ವಿಶ್ವ ರಾಮಮಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಅಯೋಧ್ಯೆ ರಾಮ ಮಂದಿರದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, “500 ವರ್ಷಗಳ ಯಜ್ಞ ಇಂದು ಪೂರ್ಣಗೊಂಡಿದೆ. ರಾಮ ಭಕ್ತರ ಮನಸ್ಸಿನಲ್ಲಿ ಅಪಾರ ಆನಂದವಿದೆ. ವರ್ಷಗಳ ಪ್ರಾರ್ಥನೆ ಇಂದು ಸಿದ್ಧಿಯಾಗಿದೆ. ಇದು ಕೇವಲ ಧ್ವಜ ಅಲ್ಲ, ಭಾರತೀಯ ಸಭ್ಯತೆಯ ಪ್ರತೀಕ. ಈ ಧ್ವಜ ರಾಮರಾಜ್ಯವನ್ನು ಪ್ರತಿರೂಪಿಸುತ್ತದೆ. ಈ ಧ್ವಜ ಸಂತರ ಸಾಧನೆ, ಶ್ರೀರಾಮನ ಆದರ್ಶದ ಉದ್ಘೋಷವಾಗಿದೆ. ಧ್ವಜ ರಾಮ ಮಂದಿರದ ಕಿರೀಟ. ಗೆಲುವು ಸತ್ಯಕ್ಕೆ ಸಿಗಲಿದೆ” ಎಂದು ಹೇಳಿದರು.
“ಈ ಧ್ವಜ ದೂರದಿಂದಲೇ ರಾಮ ಮಂದಿರದ ದರ್ಶನ ಮಾಡಿಸುತ್ತದೆ. ರಾಮ ಮಂದಿರಾ ನಿರ್ಮಾಣಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ವಿಕಸಿತ ಭಾರತ ನಮ್ಮ ಸಂಕಲ್ಪವಾಗಿದೆ. ಒಂದೇ ಸ್ಥಳದಲ್ಲಿ ವಾಲ್ಮೀಕಿ, ಅಹಲ್ಯ ಸೇರಿ ಎಲ್ಲ ಪ್ರಮುಖರಿದ್ದಾರೆ. ರಾಮ ಮಂದಿರಕ್ಕೆ ಬರುವವರು ಆವರಣದಲ್ಲಿರುವ 7 ಮಂದಿರಕ್ಕೆ ಭೇಟಿ ನೀಡಿ ಅವರ ಜೀವನದ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ರಾಮನಿಂದ ರಾಷ್ಟ್ರ ನಿರ್ಮಾಣ ಮಾಡಬೇಕು. 2047ರಲ್ಲಿ ವಿಕಸಿತ ಭಾರತ ನಿರ್ಮಾಣ ಮಾಡಲು ರಾಮನ ಗುಣ ಮೈಗೂಡಿಸಿಕೊಳ್ಳಬೇಕು” ಎಂದರು.
“ವರ್ತಮಾನದ ಬಗ್ಗೆ ಯೋಚಿಸುವವರು ಭವಿಷ್ಯದ ಪೀಳಿಗೆಗೆ ಅನ್ಯಾಯ ಮಾಡಿದಂತೆ. ನಾವು ಭವಿಷ್ಯದ ಪೀಳಿಗೆ ಬಗ್ಗೆ ಯೋಚಿಸಬೇಕು. ನಾವು ದೂರದೃಷ್ಟಿಯೊಂದಿಗೆ ಕೆಲಸ ಮಾಡಬೇಕು. ಅದಕ್ಕಾಗಿ ನಾವು ಶ್ರೀರಾಮನ ವ್ಯಕ್ತಿತ್ವದಿಂದ ಕಲಿಯಬೇಕು. ರಾಮ ಅಂದರೆ ಆದರ್ಶ, ರಾಮ ಅಂದರೆ ಪುರುಷೋತ್ತಮ. ರಾಮ ಅಂದರೆ ಧರ್ಮದ ದಾರಿಯಲ್ಲಿ ನಡೆಯುವವ, ಕ್ಷಮೆಯ ಗುಣ, ಜ್ಞಾನ ವಿವೇಕ, ಕೃತಜ್ಞತೆ, ಸೌಮ್ಯ ಸ್ವಭಾವದ ಧೃಡತೆ, ರಾಮ ಅಂದರೆ ಸತ್ಯದ ಬುನಾದಿ, ನಿಷ್ಕಲ್ಮಶ ಮನಸ್ಸು. ರಾಮ ಓರ್ವ ವ್ಯಕ್ತಿಯಲ್ಲ ಅವರೊಂದು ಮೌಲ್ಯ, ಅವರೊಂದು ದಿಕ್ಕು” ಎಂದು ನುಡಿದರು.
“ಅಯೋಧ್ಯೆ ಭಾರತದ ಸಾಂಸ್ಕೃತಿಕ ಕೇಂದ್ರ. ಅಯೋಧ್ಯೆ ವಿಕಸಿತ ಭಾರತದ ಪ್ರಭಾರಿಯಾಗಲಿದೆ. ಪ್ರಾಚೀನತೆ ಜೊತೆಗೆ ಆಧುನಿಕತೆಯ ಸಂಗಮ ಅಯೋಧ್ಯೆಯಾಗಲಿದೆ. ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ, ರೈಲ್ವೆ ಸ್ಟೇಷನ್ ಇದೆ. ಅಯೋಧ್ಯೆಯನ್ನು ಜಾಗತಿಕವಾಗಿ ಸಂಪರ್ಕಿಸಲಾಗುತ್ತಿದೆ. ಅಯೋಧ್ಯೆ ಯುಪಿಯ ಅಗ್ರ ನಗರಗಳಲ್ಲಿ ಒಂದಾಗಿ ಬೆಳೆಯುತ್ತಿದೆ. ಸಾಕಷ್ಟು ಅಭಿವೃದ್ಧಿಯಾಗಿದೆ. ಕಳೆದ 11 ವರ್ಷದಲ್ಲಿ ವಿಶ್ವದ 5ನೇ ಬಲಿಷ್ಠವಾಗಿದೆ, ಶೀಘ್ರದಲ್ಲಿ ಮೂರನೇ ಬಲಿಷ್ಠ ಆರ್ಥಿಕತೆಯಾಗಲಿದೆ” ಎಂದು ತಿಳಿಸಿದರು.































