ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿದ ‘ಶಕ್ತಿ’ ಯೋಜನೆ ಬಳಿಕ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದು ಹೀಗಾಗಿ ಸರ್ಕಾರದ ವಿರುದ್ದ ಸಿಡಿದೆದ್ದಿರುವ ಆಟೋ ಚಾಲಕರು ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಜುಲೈ 28ರಂದು ಆಟೋ ಸಂಚಾರ ಸ್ಥಗಿತಗೊಳಿಸಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ಅವರು, “ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಆಟೋ ಮತ್ತು ಟ್ಯಾಕ್ಸಿ ಚಾಲಕರು ನಷ್ಟ ಅನುಭವಿಸುವಂತೆ ಆಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಆಟೋ ಚಾಲಕನಿಗೆ ಪ್ರತಿ ತಿಂಗಳು 10 ಸಾವಿರ ಪರಿಹಾರ ಒದಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರದ ಮುಂದೆ ಅಸಂಘಟಿತ ವಾಣಿಜ್ಯ ಚಾಲಕರ ಅಭಿವೃದ್ಧಿಗಾಘಿ ನಿಗಮ ಸ್ಥಾಪಿಸಬೇಕು. ಆಟೋ, ಟ್ಯಾಕ್ಸಿ ಚಾಲಕರಿಗೆ 2 ಲಕ್ಷ ಸಾಲ ಸೌಲಭ್ಯ ನೀಡಬೇಕು. ಎಲೆಕ್ಟ್ರಿಕ್ ಆಟೋಗಳನ್ನು ರ್ಯಾಪಿಡೋ, ಓಲಾ, ಊಬರ್ ಕಂಪನಿಗೆ ನೋಂದಣಿ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.