ಮಂಗಳೂರು : ಎಡಪದವು ಎಂಬಲ್ಲಿ ಅಖಿಲೇಶ್ ಎಂಬವರ ಮೇಲೆ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಮಂಗಳೂರು ಬಂದರ್ ನಿವಾಸಿ ಸಿನಾನ್, ವೇಣೂರು ನಿವಾಸಿ ಇರ್ಷಾದ್, ವಾಮಂಜೂರು ನಿವಾಸಿ ಸುಹೈಲ್ ಅಕ್ರಮ್ ಮತ್ತು ವಾಮಂಜೂರು ಪಿಲಿಕುಳ ನಿವಾಸಿ ನಿಸಾನ್ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳ ಪೈಕಿ ಮಂಗಳೂರು ಬಂದರ್ ನಿವಾಸಿ ಸಿನಾನ್ ನನ್ನು ಸಾರ್ವಜನಿಕರು ಘಟನಾ ಸ್ಥಳದಲ್ಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಉಳಿದ ಮೂವರು ಆರೋಪಿಗಳಾದ ಇರ್ಷಾದ್ ನನ್ನು ಬಜ್ಪೆ ಪೊಲೀಸರು ಬಂಧಿಸಿದ್ದು, ವಾಮಂಜೂರು ನಿವಾಸಿ ಸುಹೈಲ್ ಅಕ್ರಮ್ ಮತ್ತು ವಾಮಂಜೂರು ಪಿಲಿಕುಳ ನಿವಾಸಿ ನಿಸಾನ್ ನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಎಡಪದವು ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಅವರು ಪೂಪಾಡಿ ಕಲ್ಲುವಿನಿಂದ ಮಂಗಳೂರು ಕಡೆ ತೆರಳುತ್ತಿದ್ದ ಸಂದರ್ಭ ಒಂದು ದ್ವಿಚಕ್ರ ವಾಹನದಲ್ಲಿ ನಾಲ್ವರು ತಲವಾರು ಹಿಡಿದು ಸಂಚರಿಸುತ್ತಿರುವುದನ್ನು ಗಮನಿಸಿ ಅದನ್ನು ತನ್ನ ಮೊಬೈಲ್ ನಲ್ಲಿ ವೀಡಿಯೊ ಚಿತ್ರೀಕರಿಸಲು ಮುಂದಾಗಿದ್ದರು. ಇದನ್ನು ಗಮನಿಸಿದ ಆರೋಪಿಗಳು ಅಖಿಲೇಶ್ ನನ್ನು ಕೊಲೆ ಮಾಡುವ ಉದ್ದೇಶದಿಂದ ತಲವಾರಿನಿಂದ ದಾಳಿ ಮಾಡಿದ್ದಾರೆ ಎಂದು ಅಖಿಲೇಶ್ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದರು.































