ಗೋವಾ : ರಾಷ್ಟ್ರದ ಸಾಂಸ್ಕೃತಿಕ ಹೆಮ್ಮೆ ಮತ್ತು ಆಧ್ಯಾತ್ಮಿಕ ಪರಂಪರೆಯ ಸಂಕೇತವಾಗಿರುವ ಮಹತ್ವದ ಕ್ಷಣದಲ್ಲಿ, ಗೋವಾದ ದಕ್ಷಿಣ ಭಾಗದಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವದ ಅತಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ಇಂದು ಲೋಕಾರ್ಪಣೆ ಮಾಡಿದರು. 77 ಅಡಿ ಎತ್ತರದಲ್ಲಿ ತಲೆ ಎತ್ತಿರುವ ಈ ಪ್ರತಿಮೆ, ಈಗ ವಿಶ್ವದ ಅತಿ ಎತ್ತರದ ಶ್ರೀರಾಮ ಮೂರ್ತಿಯಾಗಿ ಗುರುತಿಸಲ್ಪಟ್ಟಿದೆ.
ಈ ಐತಿಹಾಸಿಕ ಪ್ರತಿಮೆಯನ್ನು ಭಾರತದ ಖ್ಯಾತ ಶಿಲ್ಪಿ ರಾಮ್ ಸುತಾರ್ ರಚಿಸಿದ್ದಾರೆ. ಇದೇ ಶಿಲ್ಪಿ ಗುಜರಾತ್ನ ಪ್ರಸಿದ್ಧ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆಯನ್ನೂ ನಿರ್ಮಿಸಿದ್ದರು. ಶ್ರೀರಾಮನ ಮೂರ್ತಿಯ ಸೌಂದರ್ಯ, ಶಿಲ್ಪಕಲೆ ಮತ್ತು ಭಾವಾತ್ಮಕ ಅಭಿವ್ಯಕ್ತಿ ಪ್ರತಿಮೆಗೆ ಮತ್ತೊಂದು ವಿಶಿಷ್ಟತೆ ನೀಡುತ್ತದೆ. ಪ್ರತಿಮೆ ಅನಾವರಣದ ವೇಳೆ ಪ್ರಧಾನ ಮಂತ್ರಿ ಮೋದಿ, ರಾಮಭಕ್ತರ ಭಾವುಕ ಜಯಕಾರದ ನಡುವೆ ಮಠ ಪ್ರವೇಶಿಸಿದರು. ಮೂರ್ತಿಯ ಪಾದದಲ್ಲಿ ವಿಶೇಷ ಪೂಜೆ ಹಾಗೂ ವೈದಿಕ ಮಂತ್ರೋಚ್ಚಾರಣೆ ನಡೆಯಿತು.
ಈ ಸಂದರ್ಭದಲ್ಲಿ ಮಠಾಧೀಶರು, ಗಣ್ಯರು, ರಾಜ್ಯ ಮತ್ತು ಕೇಂದ್ರದ ಅನೇಕ ನಾಯಕರು ಉಪಸ್ಥಿತರಿದ್ದರು. ಗೋವಾದಲ್ಲಿ ನಿರ್ಮಾಣಗೊಂಡಿರುವ ಈ ಭವ್ಯ ಕಂಚಿನ ಪ್ರತಿಮೆ, ಪ್ರವಾಸೋದ್ಯಮಕ್ಕೆ ಹೊಸ ಗರಿ ನೀಡುವುದರ ಜೊತೆಗೆ ದೇಶದ ಆಧ್ಯಾತ್ಮಿಕ ನಕ್ಷೆಯಲ್ಲಿ ಮತ್ತೊಂದು ಪ್ರಮುಖ ಪವಿತ್ರ ತಾಣವಾಗಿ ಹರಿದು ಬರಲಿದೆ. ಬೃಹತ್ ವಿಗ್ರಹದ ಅನಾವರಣದೊಂದಿಗೆ, ಗೋವಾದ ಸಾಂಸ್ಕೃತಿಕ ವೈಭವಕ್ಕೂ ಹೊಸ ಅಧ್ಯಾಯ ಬರೆಯಲಾಗಿದೆ.

































