ಶ್ರೀನಗರ: ಜಮ್ಮು, ಕಾಶ್ಮೀರ ಮತ್ತು ಲಡಾಖ್ ನಲ್ಲಿ ಕಳೆದ ಒಂದು ವಾರದಿಂದ ಚಳಿಯ ತೀವ್ರತೆ ಹೆಚ್ಚಾಗಿದ್ದು, 2007ರ ಬಳಿಕ ಇದೇ ಮೊದಲ ಬಾರಿಗೆ ಮೈನಸ್ 4.5 ಡಿಗ್ರಿಗೆ ತಾಪಮಾನ ಇಳಿಕೆಯಾಗಿದೆ.
ಸ್ಪಷ್ಟ ಆಕಾಶ ಮತ್ತು ಮಳೆಯಿಲ್ಲದ ಕಾರಣ ಜಮ್ಮು, ಕಾಶ್ಮೀರ ಮತ್ತು ಲಡಾಖ್ನಾದ್ಯಂತ ಶೀತ ಅಲೆಯು ಮತ್ತಷ್ಟು ಹೆಚ್ಚಾಗಿದೆ. ಕಾಶ್ಮೀರ ಕಣಿವೆ ಮತ್ತು ಲಡಾಖ್ ಪ್ರದೇಶವು ನಿರಂತರವಾಗಿ ಭೀಕರವಾದ ಶೀತ ಅಲೆಗಳಿಂದ ತತ್ತರಿಸುತ್ತಿದ್ದು, ತಾಪಮಾನವು ಘನೀಕರಿಸುವ ಹಂತಕ್ಕಿಂತ ಕಡಿಮೆಯಾಗಿದೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಮೈನಸ್ 6.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾದರೆ, ಪ್ರವಾಸಿ ತಾಣ ಪಹಲ್ಗಾಮ್ ಕನಿಷ್ಠ ತಾಪಮಾನ ಮೈನಸ್ 5.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಣಿವೆಯ ಅತ್ಯಂತ ಶೀತ ಜಿಲ್ಲೆಗಳಲ್ಲಿ ಒಂದಾಗಿರುವ ಪುಲ್ವಾಮಾದಲ್ಲಿ ಮೈನಸ್ 6.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿರುವ ವಿಶ್ವಪ್ರಸಿದ್ಧ ಸ್ಕೀ ರೆಸಾರ್ಟ್ ಕನಿಷ್ಠ ತಾಪಮಾನ ಮೈನಸ್ 1.4 ಡಿಗ್ರಿ ಸೆಲ್ಸಿಯಸ್ ಮತ್ತು ಸೋನಾಮಾರ್ಗ್ ಪ್ರವಾಸಿ ತಾಣ ಮೈನಸ್ 3.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಕನಿಷ್ಠ ತಾಪಮಾನ ಮೈನಸ್ 6.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಬಂಡಿಪೋರಾದಲ್ಲಿ ಮೈನಸ್ 4.9 ಡಿಗ್ರಿ ಸೆಲ್ಸಿಯಸ್ ಮತ್ತು ಬಾರಾಮುಲ್ಲಾದಲ್ಲಿ ಮೈನಸ್ 5.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಲಡಾಖ್ ಪ್ರದೇಶವೂ ಸಹ ಶೀತಗಾಳಿ ಹೊಡೆತಕ್ಕೆ ಸಿಲುಕಿದೆ. ಲೇಹ್ ಪಟ್ಟಣದಲ್ಲಿ ತಾಪಮಾನ ಮೈನಸ್ 8.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಾರ್ಗಿಲ್ನಲ್ಲಿ ತಾಪಮಾನ ಮೈನಸ್ 9.6 ಡಿಗ್ರಿ ಸೆಲ್ಸಿಯಸ್ ಇತ್ತು. ಚಳಿಗಾಲವು ದೀರ್ಘಕಾಲದವರೆಗೆ ಇರಲಿದ್ದು, ತಾಪಮಾನವು ತುಂಬಾ ಕಠಿಣವಾಗಿರುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

































