ನವದೆಹಲಿ : ಮುಂದಿನ ದಿನಗಳಲ್ಲಿ ವಾಟ್ಸ್‌ಆ್ಯಪ್, ಟೆಲಿಗ್ರಾಂ, ಸ್ನ್ಯಾಪ್‌ಚಾಟ್ ಸೇರಿದಂತೆ ಪ್ರಮುಖ ಮೆಸೇಜಿಂಗ್ ಅಪ್ಲಿಕೇಶನ್‌ಗಳನ್ನು ಬಳಸಲು ನಿಮ್ಮ ಫೋನ್‌ನಲ್ಲಿ ಸಿಮ್ ಕಾರ್ಡ್ ಕಡ್ಡಾಯವಾಗಲಿದೆ. ಇದಕ್ಕಾಗಿ ದೂರಸಂಪರ್ಕ ಇಲಾಖೆ ಟೆಲಿಕಾಂ ಕಂಪನಿಗಳಿಗೂ ಹಾಗೂ ಹಲವು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೂ ಹೊಸ ನಿರ್ದೇಶನಗಳನ್ನು ಜಾರಿಗೊಳಿಸಿದೆ.
ಇಲ್ಲಿಯವರೆಗೂ, ಯಾವುದೇ ಫೋನ್‌ನಲ್ಲಿರುವ ಸಿಮ್‌ಗೆ OTP ಬಂದರೆ, ಬೇರೆ ಡಿವೈಸ್‌ನಲ್ಲೂ ಅಪ್ಲಿಕೇಶನ್‌ಗಳನ್ನು ಬಳಸುವ ಅವಕಾಶ ಇತ್ತು. ಆದರೆ ಹೊಸ ನಿಯಮ ಜಾರಿಗೆ ಬಂದ ನಂತರ, ಸಿಮ್ ಕಾರ್ಡ್ ಫೋನ್‌ನಲ್ಲಿ ಇರದೇ ಇದ್ದರೆ ಆಪ್‌ಗಳಿಗೆ ಪ್ರವೇಶ ಲಭ್ಯವಿರುವುದಿಲ್ಲ.
ಸೈಬರ್ ಅಪರಾಧ ತಡೆಯಲು ಕಡ್ಡಾಯ ನಿಯಮ: ವಾಟ್ಸ್‌ಆ್ಯಪ್, ಟೆಲಿಗ್ರಾಂ, ಸಿಗ್ನಲ್, ಅರಟ್ಟೈ, ಸ್ನ್ಯಾಪ್‌ಚಾಟ್, ಶೇರ್‌ಚಾಟ್, ಜಿಯೋಚಾಟ್ ಮತ್ತು ಜೋಶ್ ಅಪ್ಲಿಕೇಶನ್‌ಗಳಿಗೆ ಕೇಂದ್ರವು ನೀಡಿರುವ ನಿರ್ದೇಶನದಲ್ಲಿ “ಸಿಮ್ ಬೈಂಡಿಂಗ್ ” ಕಡ್ಡಾಯವಾಗಿ ಜಾರಿ ಮಾಡಬೇಕೆಂದು ಹೇಳಲಾಗಿದೆ.
ತಮ್ಮ ಮೊಬೈಲ್ ಸಂಖ್ಯೆಯಿಂದ ಸೈನ್‌ಇನ್ ಮಾಡುವ ಕೆಲವು ಆ್ಯಪ್‌ಗಳು ಸಿಮ್ ತೆಗೆದರೂ ಕೂಡಾ ಕೆಲಸ ಮಾಡುತ್ತಿವೆ. ಸೈಬರ್ ವಂಚಕರು ಇದನ್ನು ದುರುಪಯೋಗಪಡಿಸಿಕೊಂಡು, ಬೇರೆ ಸಾಧನಗಳಿಂದ ನಕಲಿ ಖಾತೆಗಳು ರಚಿಸುವುದು, ವಂಚನೆ ಮಾಡುವುದು ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಬ್ಯಾಂಕುಗಳು ಹಾಗೂ ಯುಪಿಐ ಆ್ಯಪ್‌ಗಳಲ್ಲಿ ಈಗಾಗಲೇ ಸಿಮ್ ಬೈಂಡಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಸಿಮ್ ಕಾರ್ಡ್ ತೆಗೆದರೆ ಆ್ಯಪ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಈಗ ಅದೇ ನಿಯಮವನ್ನು ಮೆಸೇಜಿಂಗ್ ಆ್ಯಪ್‌ಗಳಿಗೂ ವಿಸ್ತರಿಸಲಾಗಿದೆ.
ಹೊಸ ನಿಯಮ ಏನು?:
-ಫೋನ್‌ನಲ್ಲಿ ಸಿಮ್ ಇರದೇ ಇದ್ದರೆ ಅಪ್ಲಿಕೇಶನ್ ತೆರೆದು ಬಳಸಲು ಸಾಧ್ಯವಿಲ್ಲ.
-OTP ಮೂಲಕ ಮೊತ್ತ ಮೊದಲ ವೆರಿಫಿಕೇಷನ್ ಮಾಡಿದರೂ, ನಂತರ ಸಿಮ್ ತೆಗೆದುಬಿಟ್ಟರೆ ಆ್ಯಪ್ ನಿರ್ವಹಣೆ ನಿಲ್ಲಲಿದೆ.
-ವಂಚನೆ, ನಕಲಿ ಖಾತೆಗಳು, ಸೈಬರ್ ಕ್ರೈಮ್‌ಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ನಿಯಮ ಜಾರಿಯಾಗಲಿದೆ.
ಪೊಲೀಸರ ಪ್ರಕಾರ ಹಲವು ವಂಚಕರು ದೂರದಿಂದಲೇ ಸಾಮಾಜಿಕ ಮಾಧ್ಯಮದ ಮೂಲಕ ಹಣ ವರ್ಗಾವಣೆ, ಫ್ರಾಡ್ ಲಿಂಕ್‌ಗಳು, ನಕಲಿ ಖಾತೆಗಳಿಂದ ಜನರನ್ನು ವಂಚಿಸುತ್ತಿದ್ದರು. ಸಿಮ್ ಬೈಂಡಿಂಗ್ ಜಾರಿಯಾದರೆ, ಅಪರಾಧಿಗಳ ಪತ್ತೆ ಸುಲಭವಾಗುತ್ತದೆ ಹಾಗೂ ದುರುಪಯೋಗ ಕಡಿಮೆಯಾಗಲಿದೆ ಎಂದು ಸರ್ಕಾರ ನಂಬಿದೆ. ಹೊಸ ನಿಯಮಗಳ ಜಾರಿ ವೇಳಾಪಟ್ಟಿ ಶೀಘ್ರದಲ್ಲೇ ಹೊರ ಬೀಳಲಿದೆ ಎಂದು ಸಚಿವಾಲಯದಿಂದ ಮಾಹಿತಿ ಲಭ್ಯವಾಗಿದೆ.
































