ತಮಿಳುನಾಡು : ಭಾರತದ ಹಲವಾರು ದೇವಾಲಯಗಳಲ್ಲಿ ಸಾಮಾನ್ಯವಾಗಿ ತೆಂಗಿನಕಾಯಿ, ಹಣ್ಣು, ಲಡ್ಡು, ಪೇಡಾ, ಪಾಯಸವನ್ನು ಪ್ರಸಾದವಾಗಿ ನೀಡಲಾಗುತ್ತದೆ. ಆದರೆ ಗುಜರಾತ್ ಹಾಗೂ ತಮಿಳುನಾಡಿನ ಕೆಲವು ಪ್ರಸಿದ್ಧ ದೇವಾಲಯಗಳಲ್ಲಿ ಹೊಸ ಮತ್ತು ವಿಚಿತ್ರ ಸಂಪ್ರದಾಯವು ದಶಕಗಳಿಂದ ರೂಢಿಯಲ್ಲವೆ. ಪಿಜ್ಜಾ, ಬರ್ಗರ್, ಸ್ಯಾಂಡ್‌ವಿಚ್, ಪಾನಿಪುರಿ ಮತ್ತು ಕೋಲ್ಡ್ ಡ್ರಿಂಕ್‌ಗಳನ್ನು ನೈವೇದ್ಯವಾಗಿ ಅರ್ಪಿಸಿ, ಬಳಿಕ ಅದನ್ನು ಪ್ರಸಾದವಾಗಿ ಮಕ್ಕಳಿಗೆ ಹಂಚಲಾಗುತ್ತದೆ. ಇಂತಹ ಒಂದು ದೇಗುಲದ ಕಥನ ಇದು.
ರಾಜ್‌ಕೋಟ್‌ನ ರಪುತಾನ ಗ್ರಾಮದಲ್ಲಿರುವ ಜೀವಿಕಾ ಮಾತಾಜಿ ದೇವಾಲಯ ಸುಮಾರು 65-70 ವರ್ಷಗಳಿಂದ ಸ್ಥಾಪಿತವಾಗಿದೆ. ಈ ದೇವಲ ಮಕ್ಕಳ ಮಾತೆಯ ದೇವಸ್ಥಾನ ಎಂಬುವುದಾಗಿಯೂ ಪ್ರತೀತಿ ಇದೆ. ಮಕ್ಕಳ ಆಯುಷ್ಯ, ಆರೋಗ್ಯ ಹಾಗೂ ಸಂತೋಷಕ್ಕಾಗಿ ತಾಯಂದಿರು ಮಾಡುವ ಮಾನತಿಯ ಭಾಗವಾಗಿ ಭಕ್ತರು ಮಕ್ಕಳ ಇಷ್ಟದ ಆಹಾರಗಳನ್ನು ಪ್ರಸಾದವಾಗಿ ಅರ್ಪಿಸುತ್ತಾರೆ. ಇದು ಅಲ್ಲಿನ ನಂಬುಗೆ. ಪ್ರಾರಂಭದಲ್ಲಿ ಕೇವಲ ತೆಂಗಿನಕಾಯಿ, ಸಕ್ಕರೆ ಪ್ರಸಾದ ನೀಡಲಾಗುತ್ತಿತ್ತು, ಆದರೆ ಮಕ್ಕಳು ಪಿಜ್ಜಾ, ಬರ್ಗರ್ ಮುಂತಾದ ಆಹಾರಕ್ಕೆ ಹೆಚ್ಚು ಆಕರ್ಷಿತರಾಗಿದ್ದರಿಂದ ದೇವಾಲಯ ಸಮಿತಿಯು ಇದನ್ನು ಪ್ರಸಾದವಾಗಿ ಸ್ವೀಕರಿಸುವ ನಿರ್ಧಾರ ತೆಗೆದುಕೊಂಡಿತು ಎಂದು ಹೇಳಲಾಗಿದೆ.
ಚೆನ್ನೈ ಬಳಿಯ ಪಡಪ್ಪೈನಲ್ಲಿರುವ ಜೈ ದುರ್ಗಾ ಪೀಠಂ ದೇವಾಲಯದಲ್ಲಿಯೂ ಸಹ ಇದೇ ರೀತಿಯ ಸಂಪ್ರದಾಯವು ನಡೆಯುತ್ತಿದೆ. ಈ ದೇವಾಲಯವನ್ನು ಆಂಕೋಲಾಜಿಸ್ಟ್ ಡಾ. ಕೆ. ಶ್ರೀಧರ್ ಸ್ಥಾಪಿಸಿದ್ದರು. ಇಲ್ಲಿ ಭಕ್ತರು ತಮ್ಮ ಮಕ್ಕಳ ಜನ್ಮದಿನವನ್ನು ನೋಂದಾಯಿಸಿ, ದೇವಾಲಯದಲ್ಲಿ ಕೇಕ್ ಕಟ್ ಮಾಡಿಸುತ್ತಾರೆ ಮತ್ತು ಪ್ರಸಾದವಾಗಿ ಹಂಚುತ್ತಾರೆ. ಎಲ್ಲಾ ಆಹಾರಗಳನ್ನು ದೇವಾಲಯದ ಶುದ್ಧ ಅಡುಗೆಮನೆಯಲ್ಲಿ FSSAI ಪ್ರಮಾಣಪತ್ರದೊಂದಿಗೆ ತಯಾರಿಸಲಾಗುತ್ತದೆ ಎಂದು ಹೇಳಲಾಗಿದೆ.
ಈ ವಿಶಿಷ್ಟ ಪ್ರಸಾದದ ಹಿಂದಿನ ಮುಖ್ಯ ಉದ್ದೇಶ ಮಕ್ಕಳ ಆರೋಗ್ಯ, ದೀರ್ಘಾಯುಷ್ಯ ಮತ್ತು ಸಂತೋಷ. ಪ್ರತಿ ಬಾರಿಗೆ ಮಕ್ಕಳ ಇಷ್ಟದ ಆಹಾರವನ್ನು ದೇವರಿಗೆ ಅರ್ಪಿಸುವ ಮೂಲಕ ತಾಯಂದಿರು ತಮ್ಮ ಹರಕೆಯನ್ನು ಪೂರ್ಣಗೊಳಿಸುತ್ತಾರೆ. ಜೊತೆಗೆ, ಭಕ್ತರಿಂದ ಪಡೆದ ದೇಣಿಗೆಗಳನ್ನು ಬಡ ಮಕ್ಕಳ ಶಿಕ್ಷಣ, ಆರೋಗ್ಯ ಸೇವೆಗೆ ಬಳಸಲಾಗುತ್ತವೆ.
ಈ ಎರಡೂ ದೇವಾಲಯಗಳ ಆಧುನಿಕ ಪ್ರಸಾದವು ಭಕ್ತಿ, ಪ್ರೀತಿ ಮತ್ತು ಸಾಮಾಜಿಕ ಸೇವೆಯ ಮಿಶ್ರಣವಾಗಿ ಭಕ್ತರ ಮನಸ್ಸು ಗೆದ್ದಿದೆ. ಮಕ್ಕಳ ಸಂತೋಷ ಮತ್ತು ಆರೋಗ್ಯವನ್ನು ಗಮನಿಸಿದ ಈ ಪ್ರಯತ್ನವು ದೇವಾಲಯ ಸಂಪ್ರದಾಯದಲ್ಲಿ ಹೊಸ ಆಯಾಮವನ್ನು ತಂದಿದ್ದು, “ದೇವರಿಗೆ ಹರಕೆ ಯಾವ ರೂಪದಲ್ಲಿದ್ದರೂ ಭಕ್ತಿ ಮುಖ್ಯ” ಎಂಬ ಸಂದೇಶವನ್ನು ನೀಡುತ್ತದೆ.
































