ಶಿವಮೊಗ್ಗ : ಶಿವಮೊಗ್ಗ ಮೂಲದ ವ್ಯಕ್ತಿಯೋರ್ವ ತಾನು ಮದುವೆಯಾದ ಮರುದಿನವೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯ ಬಂಡ್ರಿ ಗ್ರಾಮದಲ್ಲಿ ನಡೆದಿದೆ.
ಹೊಸಕೊಪ್ಪ ನಿವಾಸಿ ರಮೇಶ್ (30) ಮೃತ ನವವಿವಾಹಿತ.
ನ.30 ರಂದು ಹರಪ್ಪನಹಳ್ಳಿ ಸಮೀಪದ ಬಂಡ್ರಿಯ ಮಧು-ರಮೇಶ್ ವಿವಾಹ ಶಿವಮೊಗ್ಗದಲ್ಲಿ ನಡೆದಿತ್ತು. ಮದುವೆಯ ನಂತರ ಡಿ.1 ರಂದು ವಧುವಿನ ಮನೆಗೆ ತೆರಳಲು ದಂಪತಿಗಳು ಹರಪ್ಪನಹಳ್ಳಿಯ ಬಂಡ್ರಿಗೆ ಆಗಮಿಸಿದ್ದರು. ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ಮನೆಗೆ ದಂಪತಿಯನ್ನು ಬರಮಾಡಿಕೊಳ್ಳಲಾಗಿತ್ತು.
ದಂಪತಿಗಳು ದೇವರ ದರ್ಶನಕ್ಕೆ ತೆರಳಿದ ಸಂದರ್ಭದಲ್ಲಿ ರಮೇಶ್ ಹೃದಯಾಘಾತದಿಂದ ಹಠಾತ್ ಕುಸಿದು ಬಿದ್ದಿದ್ದರು. ಆದರೆ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮದುವೆ ಸಂಭ್ರಮದ ಮನೆಯಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

































