ಚಿತ್ರದುರ್ಗ: ವಿದ್ಯಾರ್ಥಿಗಳಲ್ಲಿ ವ್ಯಸನ ಒಂದು ಸಹಜ ರೂಢಿಯಾಗಿ ರೂಪುಗೊಳ್ಳುತ್ತಿರುವುದು ಕಳವಳದ ವಿಚಾರ. ಇದನ್ನು ಬುಡಸಮೇತ ಕೀಳುವುದು ನಮ್ಮ ಗುರಿ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗ ಡಾ. ಬಿ.ಸಿ. ಭಗವಾನ್ ಹೇಳಿದರು.
ನಗರದ ಒನಕೆ ಓಬವ್ವ ವೃತ್ತದಲ್ಲಿ ಬುಧವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಜಿಲ್ಲೆಯ ಸಂಯೋಜಿತ ಕಾಲೇಜುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ನಶಾಮುಕ್ತ ಭಾರತ ಹಾಗೂ ಅಂಗಾಂಗ ದಾನ ಜಾಗೃತಿ ಅಭಿಯಾನ ಮತ್ತು ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವೈದ್ಯಕೀಯ ಕ್ಷೇತ್ರದ ಇಡೀ ಜಿಲ್ಲೆಯ ಎಲ್ಲಾ ವೃತ್ತಿಪರರು ಹಾಗೂ ವಿದ್ಯಾರ್ಥಿಗಳು ಒಂದೆಡೆ ಸೇರುವುದು, ಒಂದು ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಒಟ್ಟಾಗಿ ನಡೆಯುವುದು ಹಾಗೂ ಒಂದೇ ಗುರಿಯನ್ನು ಹಂಚಿಕೊಂಡು ಕೆಲಸ ಮಾಡುವುದು ಬಹಳ ದೊಡ್ಡ ಸಂಗತಿ. ವಿದ್ಯಾರ್ಥಿಗಳ, ಅದರಲ್ಲೂ ವೈದ್ಯಕೀಯ ವಿದ್ಯಾರ್ಥಿಗಳ ಶಕ್ತಿ ಹಾಗೂ ಚೈತನ್ಯವನ್ನು ಕಸಿಯುತ್ತಿರುವ ದುಶ್ಚಟಗಳಿಂದ ಅವರನ್ನು ದೂರ ಇಡುವುದು ಹಾಗೂ ನಶಾಮುಕ್ತ ಕ್ಯಾಂಪಸ್, ಆರೋಗ್ಯಪೂರ್ಣ ಯುವ ಕರ್ನಾಟಕವನ್ನು ಕಟ್ಟುವುದು ನಮ್ಮ ಗುರಿ. ಇದಕ್ಕಾಗಿ ಪ್ರತಿ ಜಿಲ್ಲೆಗಳಲ್ಲಿ ಜಾಗೃತಿ ಜಾಥಾಗಳಾನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.
ದೇಶದ ಬಹುದೊಡ್ಡ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವಾಗಿರುವ ರಾಜೀವ್ ಗಾಂಧಿ ವಿಶ್ವವಿದ್ಯಾಲಯವು ಪಾಠ, ಪರೀಕ್ಷೆ, ಫಲಿತಾಂಶದಂತಹ ತನ್ನ ಸಾಂಪ್ರದಾಯಿಕ ಜವಾಬ್ದಾರಿಗಳ ಜೊತೆಗೆ ವಿದ್ಯಾರ್ಥಿಗಳ ಭದ್ರ ಭವಿಷ್ಯ ಹಾಗೂ ಆ ಮೂಲಕ ಸ್ವಸ್ಥ ಸಮಾಜದ ಜವಾಬ್ದಾರಿಯನ್ನೂ ನಿರ್ವಹಿಸುತ್ತದೆ.
ವಿದ್ಯಾರ್ಥಿಗಳ ಬಗೆಗೆ, ಅವರ ಕುಟುಂಬ ಹಾಗೂ ಸಮಾಜದ ಬಗೆಗೆ ನಾವು ಹೊಂದಿರುವ ಅದಮ್ಯ ಕಾಳಜಿ ಹಾಗೂ ಕಳಕಳಿಯ ಭಾಗವಾಗಿ ಕಳೆದ ಮೂರು ತಿಂಗಳಿಂದ ಜಿಲ್ಲೆಜಿಲ್ಲೆಗಳಿಗೆ ಸಂಚರಿಸಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ನಮ್ಮ ಎಲ್ಲಾ 1500 ಕಾಲೇಜು ಆವರಣಗಳನ್ನು ನಶಾಮುಕ್ತಗೊಳಿಸುವುದು ಹಾಗೂ ನಮ್ಮ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಅಂಗಾಂಗ ದಾನದ ಬಗ್ಗೆ ತಿಳಿವಳಿಕೆ ಮೂಡಿಸುವುದು ಈ ಕಾರ್ಯಕ್ರಮಗಳ ಉದ್ದೇಶ ಎಂದು ಮಾಹಿತಿ ನೀಡಿದರು.
ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳುವ ಜೊತೆಗೆ ನಿಮ್ಮ ಕುಟುಂಬ, ನಿಮ್ಮ ಸಮಾಜ ಹಾಗೂ ದೇಶದ ಆರೋಗ್ಯವನ್ನು ಕಾಪಾಡಬೇಕು. ಅದಕ್ಕಾಗಿ ಇಂದೇ ನೀವೆಲ್ಲಾ ಪ್ರತಿಜ್ಞೆ ಮಾಡಬೇಕು- ನನ್ನ ತರಗತಿಗಳಲ್ಲಿ, ಕ್ಯಾಂಪಸ್ ಗಳಲ್ಲಿ ಯಾವುದೇ ವಿಧದ ಮಾದಕ ದ್ರವ್ಯಗಳನ್ನು ಸೇವಿಸುವುದಿಲ್ಲ ಅಥವಾ ಆ ರೀತಿಯ ವಸ್ತುಗಳ ಮಾರಾಟ ಕಂಡುಬಂದರೆ ಸುಮ್ಮನಿರುವುದಿಲ್ಲ ಎಂದು ಪ್ರತಿಯೊಬ್ಬರು ಪ್ರತಿಜ್ಞೆಮಾಡಿ. ನೀವು ಆರೋಗ್ಯವಾಗಿದ್ದರೆ ಸಮಾಜ ಆರೋಗ್ಯವಾಗಿರುತ್ತದೆ. ದೇಶ ಸುಸ್ಥಿತಿಯಲ್ಲಿರುತ್ತದೆ. ಡ್ರಗ್, ಮದ್ಯಪಾನ, ತಂಬಾಕು ಸೇವನೆಯಿಂದ ದೂರ ಇರಿ. ನಿಮ್ಮ ಸ್ನೇಹಿತರೂ ಅತ್ತ ಸುಳಿಯದಂತೆ ನೋಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಅಂಗಾಂಗದಾನ -ಜೀವದಾನ: ದೇಶದಲ್ಲಿ ಪ್ರತಿ ವರ್ಷ ಸುಮಾರು 17 ಸಾವಿರ ಅಂಗಾಂಗ ಕಸಿ ನಡೆಯುತ್ತಿದೆ. ಆದರೆ, ಅಂಗಾಂಗ ಕಸಿಗಾಗಿ ಕಾಯುತ್ತಿರುವ ರೋಗಿಗಳ ಸಂಖ್ಯೆ 3 ಲಕ್ಷಕ್ಕೂ ಅಧಿಕ ಇದೆ. ಅಂಗಾಂಗ ದಾನ ಇಂದಿನ ತುರ್ತು ಅಗತ್ಯವಾಗಿದ್ದು, ನಾವೆಲ್ಲಾ ಅಂಗಾಂಗ ದಾನ ಪ್ರತಿಜ್ಞೆಕೈಗೊಳ್ಳುವ ಮೂಲಕ ಸಾರ್ವಜನಿಕರಲ್ಲೂ ಈ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಅಂಗಾಂಗ ದಾನದ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನೀವು ಕೈಗೊಳ್ಳುವ ಒಂದು ಸಣ್ಣ ನಿರ್ಧಾರದಿಂದ ಎಂಟು ಜನರ ಜೀವ ಉಳಿಯಬಲ್ಲದು ಎಂದು ಡಾ. ಬಿ.ಸಿ.ಭಗವಾನ್ ಹೇಳಿದರು.
ಹೊಳಲ್ಕೆರೆ ಶಾಸಕರಾದ ಡಾ. ಎಂ. ಚಂದ್ರಪ್ಪ ಮಾತನಾಡಿ, ವೈದ್ಯಕೀಯ ಹಾಗೂ ನಸಿರ್ಂಗ್ ಸೇವೆ ಅತ್ಯುತ್ತಮ ಸೇವೆ. ಸಮಾಜದಲ್ಲಿ ಪರಿವರ್ತನೆ ತರುವ ಶಕ್ತಿ ಹಾಗೂ ಅವಕಾಶ ಇರುವುದು ಇದೇ ವೃತ್ತಿಯಲ್ಲಿ. ಇನ್ನೊಂದು ಜೀವ ಉಳಿಸುವ ಅವಕಾಶ ನಿಮ್ಮ ಕೈಯಲ್ಲಿ ಇರುತ್ತದೆ. ಈ ವೃತ್ತಿಯಲ್ಲಿರುವ ನೀವು ಬದ್ಧತೆ ಹಾಗೂ ನಿμÉ್ಠಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ರಾಜೀವ್ ಗಾಂಧಿ ವಿವಿಯ ಅಪರೂಪದ ಅಭಿಯಾನ-ಬಸವಕುಮಾರ ಸ್ವಾಮಿಗಳು: ವಿಶ್ವವಿದ್ಯಾಲಯವೊಂದು ಹೀಗೆ ತರಗತಿಯನ್ನು ಬಿಟ್ಟು ರಸ್ತೆಗೆ ಇಳಿದು ಜನಜಾಗೃತಿಯಲ್ಲಿ ತೊಡಗುವುದು ಅಪರೂಪ. ವಿಶ್ವವಿದ್ಯಾಲಯದ ಕುಲಪತಿ ಜಿಲ್ಲೆ ಜಿಲ್ಲೆಯಲ್ಲಿ ತಿರುಗಿ, ವಿದ್ಯಾರ್ಥಿಗಳನ್ನೆಲ್ಲಾ ಒಟ್ಟುಗೂಡಿಸಿಕೊಂಡು ಜಾಗೃತಿ ಜಾಥಾ, ಕಾರ್ಯಕ್ರಮಗಳನ್ನು ಮಾಡುತ್ತಿರುವುದನ್ನು ನಾನು ಇದೇ ಮೊದಲು ನೋಡುತ್ತಿರುವುದು ಎಂದು ಬಸವಕುಮಾರ ಸ್ವಾಮಿಗಳು ಸಂತಸ ವ್ಯಕ್ತಪಡಿಸಿದರು.
ಇಂತಹ ಬದ್ಧತೆಯನ್ನು ಪ್ರತಿಯೊಂದು ವಿವಿಗಳೂ ಪ್ರದರ್ಶಿಸಬೇಕು. ಸಮಾಮುಖಿಯಾಗಿ ಕೆಲಸ ಮಾಡಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿದರು. ಚಿತ್ರದುರ್ಗದ ಶಿವಲಿಂಗಾನಂದ ಸ್ವಾಮಿಗಳು, ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

































