ಹರಿಯಾಣ : ಯುಪಿಎಸ್‌ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಯುಪಿಎಸ್‌ಸಿ ಗಾಗಿ ಹಲವಾರು ಅಭ್ಯರ್ಥಿಗಳು ಅನೇಕ ತ್ಯಾಗಗಳನ್ನು ಮಾಡಿರುತ್ತಾರೆ. ಹೀಗೆ ವಾರ್ಷಿಕ 30 ಲಕ್ಷ ರೂ. ಪ್ಯಾಕೇಜ್‌ನ ಸಂಬಳದ ಉದ್ಯೋಗದ ಆಫರ್ ತೊರೆದು ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಅಭಿನವ್ ಸಿವಾಚ್ ಯಶೋಗಾಥೆ ಇದು.
ಹರಿಯಾಣದ ಫತೇಹಾಬಾದ್ ಜಿಲ್ಲೆಯ ಗೊರಖ್‌ಪುರ ಗ್ರಾಮದವರಾದ ಅಭಿನವ್ ಸಿವಾಚ್ ಅವರು ಡಿಟಿಯುನಿಂದ ಬಿ.ಟೆಕ್ ಮತ್ತು ಐಐಎಂ ಕೋಲ್ಕತ್ತಾದಿಂದ ಎಂಬಿಎ ಪೂರ್ಣಗೊಳಿಸಿದ್ದಾರೆ. ಅವರ ತಂದೆ ಸತ್ಬೀರ್ ಸಿವಾಚ್ ಅವರು ಸೆಲ್ಟೆಕ್ಸ್ ಇಲಾಖೆಯಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರಿಸಿದ ಅಭಿನವ್ ಅವರು ವಾರ್ಷಿಕ 30 ಲಕ್ಷ ರೂ. ಪ್ಯಾಕೇಜ್‌ನ ಸಂಬಳದ ಉದ್ಯೋಗ ಪ್ರಸ್ತಾಪವನ್ನು ಅಭಿನವ್ ಅವರು ನಿರಾಕರಿಸಿದರು. 2022 ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದ ಅಭಿನವ್ ಅವರು ಅಖಿಲ ಭಾರತ 12ನೇ ರ‍್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಅಭಿನವ್ ಅವರು ಪ್ರಸ್ತುತ ಹರಿಯಾಣದ ಕುರುಕ್ಷೇತ್ರದಲ್ಲಿ ಎಸ್‌ಡಿಎಂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಐಎಎಸ್ ಅಧಿಕಾರಿ ಅಭಿನವ್ ಸಿವಾಚ್ ಅವರು ಇದೇ ನವೆಂಬರ್ 27ರಂದು ಐಪಿಎಸ್ ಅಧಿಕಾರಿ ಆಶ್ನಾ ಚೌಧರಿ ಅವರನ್ನು ವಿವಾಹವಾಗುತ್ತಾರೆ. 2022ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದ ಆಶ್ನಾ ಚೌಧರಿ ಅವರು ಅಖಿಲ ಭಾರತ 116ನೇ ರ‍್ಯಾಂಕ್ ಪಡೆದಿದ್ದಾರೆ. ಆಶ್ನಾ ಅವರು ಪ್ರಸ್ತುತ ಉತ್ತರ ಪ್ರದೇಶದ ಮಥುರಾದಲ್ಲಿ ಎಎಸ್‌ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

































