ತನಗಿಂತ ಸುಂದರವಾಗಿ ಯಾರೂ ಇರಬಾರದು ಎನ್ನುವ ಹುಚ್ಚು ಅಸೂಯೆಯಿಂದ ಮಹಿಳೆಯೊಬ್ಬಳು ನಾಲ್ಕು ಮಂದಿ ಮಕ್ಕಳನ್ನು ಕೊಲೆಗೈದ ಆಘಾತಕಾರಿ ಘಟನೆಯೊಂದು ಹರಿಯಾಣದಲ್ಲಿ ನಡೆದಿದೆ.
ಆರು ವರ್ಷದ ಬಾಲಕಿಯನ್ನು ಕೊಂದ ಆರೋಪದಡಿ ಪಾಣಿಪತ್ ಜಿಲ್ಲೆಯ ನೌಲ್ತಾ ಗ್ರಾಮದ ಮಹಿಳೆ ಪೂನಂ (35) ಎಂಬಾಕೆಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆಘಾತಕಾರಿಯೆಂದರೆ, ವಿಚಾರಣೆಯಲ್ಲಿ ಪೂನಂ ಈ ಕೊಲೆ ಮಾತ್ರವಲ್ಲ ತನ್ನ ಸ್ವಂತ ಮಗ ಸೇರಿದಂತೆ ಇನ್ನೂ ಮೂವರು ಮಕ್ಕಳನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾಳೆ. ಇದರಿಂದ ಆಕೆ ಹೇಳಿದ್ದನ್ನು ಕೇಳಿ ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದಾರೆ. ಸೋನಿಪತ್ ಮೂಲದ ಆರು ವರ್ಷದ ವಿಧಿ ತನ್ನ ಕುಟುಂಬದೊ೦ದಿಗೆ ಸಂಬ೦ಧಿಕರ ಮದುವೆಗೆ ಪಾಣಿಪತ್ನ ನೌಲ್ತಾ ಗ್ರಾಮಕ್ಕೆ ಬಂದಿದ್ದಳು. ಸೋಮವಾರ ಮಧ್ಯಾಹ್ನ ಮದುವೆ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾಗ ವಿಧಿ ಕಾಣೆಯಾಗಿದ್ದಾಳೆ. ಒಂದು ಗಂಟೆಯ ನಂತರ ಅವಳ ಅಜ್ಜಿ ಓಂವತಿ ಮನೆಯ ಮೊದಲ ಮಹಡಿಯಲ್ಲಿರುವ ಅಂಗಡಿಯ ಕೋಣೆಯನ್ನು ತೆರೆದಾಗ ವಿಧಿಯ ಶವ ಮರೆಮಾಚಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಧಿಯನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ವಿಧಿಯ ತಂದೆ ಸಂದೀಪ್ ಪೊಲೀಸ್ ಠಾಣೆಯಲ್ಲಿ ಕೊಲೆ ಆರೋಪದಡಿ ದೂರು ದಾಖಲಿಸಿದರು. ಪಾಣಿಪತ್ ಎಸ್ಪಿ ಭೂಪೇಂದ್ರ ಸಿಂಗ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಿದಾಗ ಆಘಾತಕಾರಿ ಸತ್ಯ ಬಯಲಾಗಿದೆ. ತನಗಿಂತ ಸುಂದರ ಮಕ್ಕಳು ಬದುಕಬಾರದು ಎಂಬ ಕ್ರೂರ ಮನೋಭಾವದಿಂದ ವಿಧಿಯನ್ನು ಕೊಲೆ ಮಾಡಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲದೇ 2023ರಲ್ಲಿ ತನ್ನ ಅತ್ತಿಗೆಯ ಮಗಳನ್ನು ಕೊಲೆ ಮಾಡಿದ್ದಾಳೆ. ಆಕೆ ತುಂಬಾ ಸುಂದರಿಯಾಗಿದ್ದಳು ಎಂಬ ಕಾರಣಕ್ಕೆ. ಅದೇ ವರ್ಷ ತನ್ನ ಸ್ವಂತ ಮಗನನ್ನು ನೀರಿನಲ್ಲಿ ಮುಳುಗಿಸಿ ಯಾವುದೇ ಅನುಮಾನ ಬರದಂತೆ ಕೊಲೆ ಮಾಡಿದ್ದಾಳೆ. 2025 ಆಗಸ್ಟ್ನಲ್ಲಿ ಸಿವಾ ಗ್ರಾಮದ ಮತ್ತೊಂದು ಬಾಲಕಿಯನ್ನು ತನಗಿಂತ ಸುಂದರವಾಗಿ ಕಾಣುತ್ತಿದ್ದಳು ಎಂಬ ಕಾರಣಕ್ಕೆ ಕೊಲೆ ಮಾಡಿದ್ದಾಳೆ. ಈಗ ಆರು ವರ್ಷದ ವಿಧಿಯನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.

































