ಉತ್ತರ ಪ್ರದೇಶ: ಯುಪಿಎಸ್‌ಸಿಯು ಭಾರತದ ಅತ್ಯಂತ ಕಠಿಣ ಪರಿಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯನ್ನು ಕೆಲ ಅಭ್ಯರ್ಥಿಗಳು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುತ್ತಾರೆ. ಇನ್ನು ಕೆಲವರು ಎರಡು ಮೂರು ಪ್ರಯತ್ನಗಳ ಬಳಿಕ ಉತ್ತೀರ್ಣರಾಗಲು ಸಫಲರಾಗುತ್ತಾರೆ. ಹೀಗೆ ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐಪಿಎಸ್ ಅಧಿಕಾರಿ ಆಶ್ನಾ ಚೌಧರಿ ಯಶೋಗಾಥೆ ಇದು.
ಆಶ್ನಾ ಚೌಧರಿ ಉತ್ತರ ಪ್ರದೇಶದ ಪಿಲ್ಖುವಾ ಎಂಬ ಪಟ್ಟಣದವರು. ಆಶ್ನಾ ಅವರ ತಂದೆ ಡಾ. ಅಜಿತ್ ಚೌಧರಿ ಅವರು ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಅವರ ತಾಯಿ ಇಂದು ಸಿಂಗ್ ಗೃಹಿಣಿ.
ಆಶ್ನಾ ಅವರ ಶಾಲಾ ಶಿಕ್ಷಣವು ಪಿಲ್ಖುವಾದ ಸೇಂಟ್ ಕ್ಸೇವಿಯರ್ ಶಾಲೆ, ಉದಯಪುರದ ಸೇಂಟ್ ಮೇರಿಸ್ ಶಾಲೆ ಮತ್ತು ಗಾಜಿಯಾಬಾದ್‌ನ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಪಡೆದರು. ಅವರು ಅತ್ಯುತ್ತಮ ವಿದ್ಯಾರ್ಥಿನಿಯಾಗಿದ್ದು, 12ನೇ ತರಗತಿಯಲ್ಲಿ 96.5% ಅಂಕ ಗಳಿಸಿದ್ದರು.
ಆಶ್ನಾ ಚೌಧರಿ ಅವರು 2019 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು. 2023 ರಲ್ಲಿ, ಅವರು ಸೌತ್ ಏಷ್ಯನ್ ವಿಶ್ವವಿದ್ಯಾಲಯದಲ್ಲಿ ಇಂಟರ್‌ನ್ಯಾಷನಲ್ ರಿಲೇಶನ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಕಾಲೇಜು ಶಿಕ್ಷಣದ ನಂತರ ಆಶ್ನಾ ಅವರು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಪ್ರಾರಂಭಿಸಿದರು. 2020 ರಲ್ಲಿ ಮೊದಲ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು ಉತ್ತೀರ್ಣರಾಗಲು ವಿಫಲರಾದರು. ನಿರಾಶೆಗೊಳ್ಳದೆ 2021 ರಲ್ಲಿ ಮತ್ತೆ ಪ್ರಯತ್ನಿಸಿದರು. ಎರಡನೇ ಬಾರಿಯೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದರೂ ಧೃತಿಗೆಡಲಿಲ್ಲ. 2022 ರಲ್ಲಿ ಮೂರನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು, ಅಂತಿಮವಾಗಿ 116 ರ‍್ಯಾಂಕ್ ಗಳಿಸಿಸುತ್ತಾರೆ. ಈ ಮೂಲಕ ಐಪಿಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ. ಪ್ರಸ್ತುತ ಆಶ್ನಾ ಅವರು ಉತ್ತರ ಪ್ರದೇಶದ ಮಥುರಾದಲ್ಲಿ ಎಎಸ್‌ಪಿ ಆಗಿ ನಿಯೋಜನೆಗೊಂಡಿದ್ದಾರೆ.

































